ಬೆಂಗಳೂರು: ರಾಜ್ಯ ಸರಕಾರದ ಎಲ್ಲ ಇಲಾಖೆಗಳಲ್ಲಿ ಕ್ರೀಡಾ ಪಟುಗಳಿಗೆ ಶೇ. 2 ರಷ್ಟು ಮೀಸಲು ಕಲ್ಪಿಸುವ ಕಡತಕ್ಕೆ ಸದ್ಯದಲ್ಲೇ ನಾನು ಸಹಿ ಹಾಕುತ್ತೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕ್ರೀಡಾಪಟುಗಳ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡಾ ಮನೋಭಾವದಿಂದ ಶಿಸ್ತು, ಹೆಚ್ಚಳ ಸಾಧಿಸುವ ಇಚ್ಛಾ ಶಕ್ತಿ ಇರುತ್ತದೆ. ಶಿಸ್ತಿನಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದು ಬಹಳ ಮುಖ್ಯ. ನಾನು ಯಾವತ್ತೂ ಹೇಳುತ್ತೇನೆ ಪ್ಲೇ ಟು ವಿನ್, ಪ್ಲೇ ನಾಟ್ ಟು ಲೂಸ್ ಎಂದು. ನೀವು ಯಾವತ್ತೂ ಗೆಲುವಿಗಾಗಿ ಆಡಬೇಕು. ನಿಮ್ಮ ಸಾಧನೆ ನಮಗೆ ಸ್ಫೂರ್ತಿಯಾಗಿದೆ ಎಂದರು.
ನಮ್ಮ ಹುಡುಗರು ಹಾಗೂ ಹುಡುಗಿಯರ ಸಾಮರ್ಥ್ಯ ಬಗ್ಗೆ ನನಗೆ ಬಹಳ ವಿಶ್ವಾಸ ಇತ್ತು. ಅದಕ್ಕೆ ನೀವು ಏನು ಮಾಡಬೇಕು ಎಂಬುದನ್ನು ನೀವು ತಿಳಿದುಕೊಳ್ಳಿ. ನಾವು ನಿಮ್ಮ ಜೊತೆಗಿದ್ದೇವೆ. ಕ್ರೀಡಾಪಟುಗಳಿಗೆ ಭದ್ರತೆ ಬೇಕು. ನೀವು ಸಾಧನೆ ಮಾಡಿದರೆ ಸರ್ಕಾರಕ್ಕೂ ಉತ್ಸಾಹ ಬರುತ್ತದೆ. ಬೇರೆ ಇಲಾಖೆಗಳಲ್ಲೂ ಕ್ರೀಡೆ ಪಟುಗಳಿಗೆ ಉದ್ಯೋಗದಲ್ಲಿ 2% ಮೀಸಲಾತಿ ನೀಡುವ ಕಡತಕ್ಕೆ ಸಹಿ ಹಾಕುತ್ತೇನೆ. ನೌಕರಿಗಾಗಿ ಕ್ರೀಡೆ ಆಡಬೇಡಿ. ನೀವು ಮೊದಲಿಗೆ ದೇಶಕ್ಕಾಗಿ ಆಡಿ. ಗೆಲ್ಲೋದಕ್ಕಾಗಿ ಆಡಿ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ. ನಿಮ್ಮ ಸುರಕ್ಷತೆ ನೋಡುತ್ತದೆ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದು ವಿವರಿಸಿದರು.
ಇದನ್ನೂ ಓದಿ:ಸಚಿವ ಮಾಧುಸ್ವಾಮಿ ‘ಮ್ಯಾನೇಜ್ಮೆಂಟ್’ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ
ಕಾಮನ್ವೆಲ್ತ್ ಕೂಟದಲ್ಲಿ ಬೆಳ್ಳಿ ಪದಕ ವಿಜೇತರಾದ ಅಶ್ವಿನಿ ಪೊನ್ನಪ್ಪ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ತಲಾ 15 ಲಕ್ಷ ನಗದು ಬಹುಮಾನ, ಕಂಚಿನ ಪದಕ ಗೆದ್ದಿರುವ ಗುರುರಾಜ್ ಪೂಜಾರಿ ಅವರಿಗೆ 8 ಲಕ್ಷ ನಗದು ಬಹುಮಾನ ನೀಡಿ ಸಿಎಂ ಅಭಿನಂದನೆ ಸಲ್ಲಿಸಿದರು.