ಬೆಂಗಳೂರು: ರಾಜ್ಯದಲ್ಲಿ ಮುಂದಿನ 2 ದಿನಗಳ ಕಾಲ ಸಾಧಾರಣ ಮಳೆ ಮುಂದುವರಿಯಲಿದ್ದು, ಉಷ್ಣಾಂಶ ಇನ್ನಷ್ಟು ಇಳಿಕೆಯಾಗಲಿದೆ.
ನ.26ರ ವರೆಗೆ ರಾಜ್ಯದ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಸಾಧಾರಣದಿಂದ ಹಗುರ ಮಳೆಯಾದರೆ, ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಂಜಿನಿಂದ ಕೂಡಿದ ಹನಿ ಮಳೆಯಾದರೆ, ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತುಂತುರು ಮಳೆಯಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಈ ಮಾದರಿಯ ಚಳಿ-ಗಾಳಿ ಮಿಶ್ರಿತ ಹಗುರ ಮಳೆಯಾಗುತ್ತಿದೆ. ನ.26ರ ಬಳಿಕ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ.
ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಗುರ ಮಳೆಯಾಗುವ ಸಾಧ್ಯತೆಗಳಿವೆ. ಕೆಲವು ಕಡೆ ಮಂಜು ಮುಸುಕಲಿದ್ದು, ಗರಿಷ್ಠ 23 ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟೆಷ್ಟು ಮಳೆ ?: ಗುರುವಾರ ದಕ್ಷಿಣ ಒಳನಾಡು, ಕರಾವಳಿಯ ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಿದೆ. ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣದ ಜತೆಗೆ ಚಳಿ ಉಂಟಾಗಿದೆ. ಬೆಳಗಾವಿಯ ಲೋಂಡಾದಲ್ಲಿ 4 ಸೆಂ.ಮೀ, ಕೋಲಾರದ ಮಾಲೂರು, ರಾಮನಗರದಲ್ಲಿ ತಲಾ 3 ಸೆಂ.ಮೀ, ಹೊಸಕೋಟೆ, ಬೆಂಗಳೂರು, ಕನಕಪುರದಲ್ಲಿ ತಲಾ 2 ಸೆಂ.ಮೀ, ಚಿಕ್ಕಮಗಳೂರು, ಮೈಸೂರಿನ ತಿ.ನರಸೀಪುರ, ಮೈಸೂರು, ಕೃಷ್ಣಸಾಗರ ಅಣೆಕಟ್ಟು, ಶ್ರೀರಂಗಪಟ್ಟಣ, ಮಳವಳ್ಳಿ, ಚಿಕ್ಕಬಳ್ಳಾಪುರದ ತೊಂಡೆಬಾವಿ, ಗೌರಿಬಿದನೂರು, ತುಮಕೂರಿನ ಗುಬ್ಬಿ, ಮಧುಗಿರಿ, ತುಮಕೂರು, ಚನ್ನಪಟ್ಟಣ, ರಾಮನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.