ಹಾಸನ: ರಾಜ್ಯದಲ್ಲಿ ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಅನರ್ಹ ಫಲಾನುಭವಿಗಳು ಎರಡು ತಿಂಗಳೊಳಗೆ ಇಲಾಖೆಗೆ ವಾಪಸ್ ನೀಡಲು ಗಡುವು ನಿಗದಿಪಡಿಸಲಾಗಿದೆ. ಏಪ್ರಿಲ್ ಅಂತ್ಯದೊಳಗೆ ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸ ದಿದ್ದರೆ ಆಹಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೇ ಅನರ್ಹರನ್ನು ಪತ್ತೆ ಹಚ್ಚಿ ಭಾರೀ ಪ್ರಮಾಣದ ದಂಡ ವಿಧಿಸಲಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿಗದಿತ ಅವಧಿ ಯೊಳಗೆ ಅನರ್ಹರರು ಬಿಪಿಎಲ್ ಪಡಿತರ ಕಾರ್ಡ್ ಗಳನ್ನು ಹಿಂತಿರುಗಿಸದಿದ್ದರೆ ಆಹಾರ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಂತಹವನ್ನು ಪತ್ತೆ ಹಚ್ಚಿ, ಅನರ್ಹರು ಕಾರ್ಡ್ ಪಡೆದ ದಿನದಿಂದ ಕಾರ್ಡ್ ರದ್ದುಪಡಿಸುವ ದಿನದವರೆಗೆ ಎಷ್ಟು ಅಹಾರ ಧಾನ್ಯವನ್ನು ಪಡೆದಿರುತ್ತಾರೋ ಆದರ ಮೊತ್ತವನ್ನು ವಸೂಲಿ ಮಾಡಲಾಗುವುದು ಮತ್ತು ಕಾನೂನು ಕ್ರಮವನ್ನೂ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾರ್ಡ್ ಹಿಂತಿರುಗಿಸಲು ಗಡುವು: ರಾಜ್ಯದಲ್ಲಿ ಈವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಗುರುತಿಸಿ ಹಿಂತೆಗೆದುಕೊಂಡಿದ್ದು, 55 ಸಾವಿರ ಜನರಿಗೆ ದಂಡ ವಿಧಿಸಿ ವಸೂಲಿ ಮಾಡಲಾಗಿದೆ. 35 ಸಾವಿರ ಎಪಿಎಲ್ ಕಾರ್ಡ್‌ಗಳನ್ನು ಬಿಪಿಎಲ್ ಕಾರ್ಡ್‌ಗಳಾಗಿ ಪರಿವರ್ತಿಸಲಾಗಿದೆ. ಇನ್ನೂ ಭಾರೀ ಪ್ರಮಾಣದಲ್ಲಿ ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಮಾಹಿತಿಯಿದೆ. ಹಾಗಾಗಿ ಏಪ್ರಿಲ್ ಅಂತ್ಯದೊಳಗೆ ಅನರ್ಹರು ಬಿಪಿಎಲ್ ಕಾರ್ಡ್‌ಗಳನ್ನು ಹಿಂತಿರುಗಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.
2 ತಿಂಗಳು ಕಾಲವಕಾಶ: ಬಿಪಿಎಲ್ ಕಾರ್ಡ್‌ದಾರರ ಕುಟುಂಬದವರು ಬಯೋಮೆಟ್ರಿಕ್ ನೀಡಿ ಅರ್ಹ ರೆಂದು ಖಾತರಿಪಡಿಸುವ ಇ – ಕೈವೈಸಿ ದಾಖಲಾತಿಯ ಅವಧಿ ಇನ್ನೂ ಎರಡು ತಿಂಗಳು ವಿಸ್ತರಿಸಲಾಗಿದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳವರು ಸರ್ಕಾರಿ ರಜೆ ದಿನ ಹಾಗೂ ಮಂಗಳವಾರ ಹೊರತುಪಡಿಸಿ ಉಳಿದ ದಿನ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಅಂಗಡಿಯನ್ನು ತೆರೆಯುವುದನ್ನು ಕಡ್ಡಾಯ ಗೊಳಿಸಲಾಗಿದೆ. ಕಳೆದೆರಡು ತಿಂಗಳಿನಿಂದಲೂ ಇ -ಕೆವೈಸಿ ಪ್ರಕ್ರಿಯೆ ನಡೆಯುತ್ತಿದ್ದು, ಕಳೆದ ತಿಂಗಳವರೆಗೂ ಸರ್ವರ್ ಸಮಸ್ಯೆ ಇತ್ತು ಹಾಗಾಗಿ ಕಾರ್ಡ್‌ದಾರರು ಪೂರ್ಣ ಪ್ರಮಾಣದಲ್ಲಿ ಬಯೋಮೆಟ್ರಿಕ್ ನೀಡಲು ಸಾಧ್ಯವಾಗಿಲ್ಲ. ಈಗ ಸರ್ವರ್ ಸಮಸ್ಯೆ ಪರಿಹರಿಸಲಾಗಿದ್ದು, ಇನ್ನೂ ಎರಡು ತಿಂಗಳು ಕಾಲಾವಕಾಶವನ್ನೂನೀಡಲಾಗಿದೆ ಎಂದು ಹೇಳಿದರು.
ನೋಂದಣಿ 15 ದಿನ ವಿಸ್ತರಣೆ: ರೈತರು ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ, ಜೋಳ ಮಾರಾಟಕ್ಕೆ ಹೆಸರು ನೋಂದಣಿ ಅವಧಿಯನ್ನು ಇನ್ನೂ 15 ದಿನ ವಿಸ್ತರಣೆ ಮಾಡಲಾಗಿದೆ. ಮಾ.15 ರವರೆಗೂ ನೋಂದಣಿ ಮಾಡಬಹುದಾಗಿದೆ. ಇದು ವರೆಗೆ 1.55 ಮೆಟ್ರಿಕ್ ಟನ್ ರಾಗಿ ಮಾರಾಟಕ್ಕೆ ರೈತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ 2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ನಿರ್ಧರಿಸಲಾಗಿದೆ.
ಇನ್ನು 15 ದಿನಗಳಲ್ಲಿ 45 ಸಾವಿರ ಟನ್ ರಾಗಿ ಮಾರಾಟಕ್ಕೆ ರೈತರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು. ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಬಿ.ಎ.ಪರಮೇಶ್, ಆಹಾರ ಇಲಾಖೆ ಉಪ ನಿರ್ದೇಶಕಿ ಸವಿತಾ ಮತ್ತಿತರ ಆಧಿಕಾರಿಗಳು ಇದ್ದರು.