ಬೆಂಗಳೂರು: ರಾಜ್ಯಾದ್ಯಂತ ರಸ್ತೆ ಗುಂಡಿ ದುರಸ್ತಿ ಕಾರ್ಯ ಕೈಗೊಂಡು ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೇಸಿಗೆ ಆರಂಭಕ್ಕೂ ಮುನ್ನವೇ ರಸ್ತೆ ಗುಂಡಿ ದುರಸ್ತಿಗೆ ಸೂಚಿಸಲಾಗಿದೆ. ಮಲೆನಾಡಿನ ಭಾಗದ ಶಾಲಾ ಮಕ್ಕಳ ಅನುಕೂಲಕ್ಕಾಗಿ 600 ಶಾಲಾ ಸಂಪರ್ಕ ಸೇತುವೆಗಳನ್ನು 120 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವಂತೆ ಸೂಚಿಸಲಾಗಿದ್ದು, ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.
ನಿಗಮ, ಮಂಡಳಿ ಅಧ್ಯಕ್ಷರ ಆಯ್ಕೆ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, “ನನಗೆ ದಿನೇಶ್ ಗುಂಡೂರಾವ್ ಅವರು ಏನೂ ಹೇಳುವ ಅಗತ್ಯವಿಲ್ಲ. ಅವರು ಮೊದಲು ಕಾಂಗ್ರೆಸ್ ಪಕ್ಷದ ಶಾಸಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲಿ.
ನನಗೆ ಹೇಳ್ಳೋಕೆ ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿಯವರಿದ್ದು, ಅವರು ಹೇಳಿದರೆ ಕೇಳುತ್ತೇನೆ. ನಾನೂ ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದು, ಮತ್ತೂಬ್ಬರಿಂದ ಹೇಳಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದರು.
ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಕಣ್ಣೀರಿನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಕೈಯಲ್ಲಿ ಅಧಿಕಾರವಿದ್ದರೂ ನಮ್ಮವರಿಗೆ ಏನೊಂದೂ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ನೋವಿನಲ್ಲಿ ಅವರು ಹೀಗೆ ಮಾತನಾಡಿದ್ದಾರೆ.
ಅಧಿಕಾರವಿದ್ದರೂ ನಮ್ಮ ಜನರಿಗೆ ಅನುಕೂಲ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ ಎಂಬ ನೋವಿದೆ. ದೇವೇಗೌಡರು ಎಂದೂ ಹೊಂದಾಣಿಕೆ ರಾಜಕಾರಣ ಮಾಡಿದವರಲ್ಲ. ದೇವೇಗೌಡರು ಅದೇ ನೋವಿನಿಂದ ಕಣ್ಣೀರು ಹಾಕಿದ್ದು, ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.