Advertisement

ಹದಗೆಟ್ಟ ಯಡಮೊಗೆ ಸಂಪರ್ಕಿಸುವ 2 ಮುಖ್ಯ ರಸ್ತೆಗಳು

12:05 AM Jun 08, 2019 | Team Udayavani |

ಹೊಸಂಗಡಿ: ಯಡಮೊಗೆಯಿಂದ ಹೊಸಂಗಡಿ, ಸಿದ್ದಾಪುರ ಸಹಿತ ಕುಂದಾಪುರ ಕಡೆಗೆ ಸಂಪರ್ಕ ಕಲ್ಪಿಸುವ ಯಡಮೊಗೆ – ಕಾರೂರು – ಕೆರೆಕಟ್ಟೆ – ಹೊಸಂಗಡಿ ರಸ್ತೆ ಹಾಗೂ ಯಡಮೊಗೆ – ಹೊಸಬಾಳು – ಹೊಸಂಗಡಿ ರಸ್ತೆಗಳೆರಡು ಸಂಪೂರ್ಣ ಹದಗೆಟ್ಟಿವೆ. ಇವರೆಡೂ ರಸ್ತೆಗಳಲ್ಲಿ ಮಳೆಗಾಲದಲ್ಲಿ ಸಂಚರಿಸುವುದು ದುಸ್ತರವೆನಿಸಿದೆ.

Advertisement

ಹೊಸಂಗಡಿಯಿಂದ ಕಾರೂರು – ಕೆರೆಕಟ್ಟೆಯಾಗಿ ಯಡಮೊಗೆ ಕಡೆಗೆ ಸಂಚರಿಸುವ ಸುಮಾರು 6 ಕಿ.ಮೀ. ಉದ್ದದ ರಸ್ತೆ ಹಾಗೂ ಯಡಮೊಗೆಯಿಂದ ಹೊಸಬಾಳು ಸೇತುವೆ ಮೂಲಕವಾಗಿ ಹೊಸಂಗಡಿಗೆ ಸಂಚರಿಸುವ ಸುಮಾರು 8 ಕಿ.ಮೀ. ಉದ್ದದ ರಸ್ತೆಗಳಲ್ಲಿ ಡಾಮರು ಕಿತ್ತು ಹೋಗಿ ಜಲ್ಲಿ ಕಲ್ಲು, ಬರೀ ಹೊಂಡ – ಗುಂಡಿಗಳು ಕಂಡುಬರುತ್ತಿದೆ.

20 ವರ್ಷದ ಹಿಂದೆ ಡಾಮರು
ಈ ಎರಡೂ ರಸ್ತೆಗಳಿಗೆ ಪ್ರಧಾನಮಂತ್ರಿ ಗ್ರಾಮ ಸಡಕ್‌ ರಸ್ತೆ ಅಭಿವೃದ್ಧಿ ಯೋಜನೆ ಯಡಿ 20 ವರ್ಷದ ಹಿಂದೆ ಡಾಮರು ಆಗಿತ್ತು. ಬಳಿಕ ಇದುವರೆಗೂ ಮರು ಡಾಮರು ಆಗಿರಲಿಲ್ಲ. ಹೊಂಡ – ಗುಂಡಿಗೆ ತೇಪೆ ಹಾಕುವ ಕಾರ್ಯವೂ ನಡೆದಿಲ್ಲ.

ಬಸ್‌ ಸಂಚಾರಕ್ಕೂ ತೊಂದರೆ
ಹದಗೆಟ್ಟ ರಸ್ತೆಯಿಂದಾಗಿ ಯಡಮೊಗೆ ಯಿಂದ ಸಿದ್ದಾಪುರ, ಕುಂದಾಪುರ ಕಡೆಗೆ ಸಂಚರಿಸುವ ಬಸ್‌ಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಈಗಾಗಲೇ ಕೆಲ ಖಾಸಗಿ ಬಸ್‌ಗಳು ಸಂಚಾರವನ್ನೇ ಸ್ಥಗಿತಗೊಳಿಸಿವೆ. ಮಳೆಗಾಲ ಆರಂಭ ವಾದರೆ ಸರಕಾರಿ ಬಸ್‌ಗಳ ಸಂಚಾರಕ್ಕೂ ಅಡಚಣೆಯಾಗುವ ಸಾಧ್ಯತೆಗಳಿವೆ.

ಯಡಮೊಗೆ, ಕಾರೂರು, ಹೊಸಬಾಳು ಭಾಗದ ಸುಮಾರು 3 ಸಾವಿರಕ್ಕೂ ಹೆಚ್ಚು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಹೊಸಬಾಳುವಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಮೋರಿಯು ಕುಸಿದರೆ, ಸಂಪರ್ಕವೇ ಕಡಿತಗೊಳ್ಳುವ ಸಂಭವವಿದೆ ಎಂಬ ಆತಂಕ ಇಲ್ಲಿನ ಜನರದ್ದಾಗಿದೆ.

Advertisement

ನಿತ್ಯ ಸಂಚಾರ
ಯಡಮೊಗೆಯಿಂದ ಹೊಸಂಗಡಿ, ಶಂಕರನಾರಾಯಣ, ಕುಂದಾಪುರ ಭಾಗದ ಕಾಲೇಜುಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡುವ ಅನೇಕ ಮಕ್ಕಳಿದ್ದಾರೆ. ಈ ಹದಗೆಟ್ಟ ರಸ್ತೆಯಿಂದಾಗಿ ಸರಿಯಾದ ಸಮಯಕ್ಕೆ ಬಸ್‌ ವ್ಯವಸ್ಥೆ ಕೂಡ ಇಲ್ಲದಿರುವುದರಿಂದ ಮಕ್ಕಳು ನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಹೊಂಡ – ಗುಂಡಿಗಳಿಗೆ ತೇಪೆ ಹಾಕಿ, ಬಳಿಕ ರಸ್ತೆಗೆ ಮರು ಡಾಮರೀಕರಣ ಮಾಡಬೇಕೆನ್ನುವ ಆಗ್ರಹ ಊರವರದ್ದಾಗಿದೆ.

3 ಕೋ. ರೂ. ಅನುದಾನ
ಹೊಸಬಾಳು ಸೇತುವೆ ಹಾಗೂ ಯಡಮೊಗೆಯಿಂದ ಹೊಸಂಗಡಿಗೆ ಸಂಪರ್ಕಿಸುವ ಮುಖ್ಯ ರಸ್ತೆಗೆ 3 ಕೋ.ರೂ. ಅನುದಾನ ಮೀಸಲಿಡಲಾಗಿದೆ. ಈ ಬಗ್ಗೆ ಈಗಾಗಲೇ ಕರಡು ಯೋಜನೆ ಸಿದ್ಧಪಡಿಸಿ, ಪ್ರಸ್ತಾವನೆಗೆ ಕಳುಹಿಸಲಾಗಿದೆ. ಇನ್ನು 15 ದಿನಗಳೊಳಗೆ ಮಂಜೂರಾತಿ ಸಿಗುವ ಸಾಧ್ಯತೆಗಳಿವೆ.
-ದುರ್ಗಾದಾಸ್‌,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌, ಕುಂದಾಪುರ ತಾ.ಪಂ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next