Advertisement

ಶೋಪಿಯಾನ್‌ ಗುಂಡಿನ ಕಾಳಗ: ಇಬ್ಬರು ಉಗ್ರರ, ಇತರ ನಾಲ್ವರು ಬಲಿ

11:42 AM Mar 05, 2018 | Team Udayavani |

ಶ್ರೀನಗರ  : ಜಮ್ಮು ಕಾಶ್ಮೀರದ ದಕ್ಷಿಣ ಶೋಪಿಯಾನ್‌ ಜಿಲ್ಲೆಯ ದುರ್ಗಮ ಗ್ರಾಮವೊಂದರಲ್ಲಿ ನಿನ್ನೆ ಭಾನುವಾರ ರಾತ್ರಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಗುಂಡಿನ ಕಾಳಗ ಏರ್ಪಟ್ಟಿದ್ದ ತಾಣದಲ್ಲಿ ಇಂದು ಇನ್ನೂ ಒಂದು ಶವ ಪತ್ತೆಯಾಯಿತು. ಹತರಾದವರಲ್ಲಿ ಇಬ್ಬರು ಎಲ್‌ ಇ ಟಿ ಉಗ್ರರು ಮತ್ತು ಇತರರು ನಾಲ್ವರು ಎಂದು ಸೇನೆ ತಿಳಿಸಿದೆ. 

Advertisement

ಗುಂಡೇಟಿನಿಂದ ತುಂಬಿದ್ದ ಶವವನ್ನು ಲಷ್ಕರ್‌ ಎ ತಯ್ಯಬ  ಸಂಘಟನೆಯ ಉಗ್ರ ಆಶಿಕ್‌ ಹಸೇನ್‌ ಭಟ್‌ ನದ್ದೆಂದು ಗೊತ್ತಾಗಿದೆ. ಸೇನೆಯ 44ನೇ ರಾಷ್ಟ್ರೀಯ ರೈಫ‌ಲ್‌ ಪಡೆ ಮತ್ತು ಉಗ್ರರ ನಡುವೆ ಪಹನೂ ಎಂಬಲ್ಲಿಂದ ಹತ್ತು ಕಿ.ಮೀ. ದೂರದ ಸೈದಾಪೋರಾದಲ್ಲಿನ ಆ್ಯಪಲ್‌ ತೋಟವೊಂದರಲ್ಲಿ  ಭಾನುವಾರ ರಾತ್ರಿ  ಗುಂಡಿನ ಕಾಳಗ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಭದ್ರತಾ ಪಡೆಗಳ ಗುಂಡಿಗೆ ಆರು ಮಂದಿ ಹತರಾದುದನ್ನು ಅನುಸರಿಸಿ ಶೋಪಿಯಾನ್‌ನ ಹಲವು ಭಾಗಗಳಲ್ಲಿ  ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಕಲ್ಲೆಸೆಯುವ ಪ್ರತಿಭಟನಕಾರರನ್ನು ಎದುರಿಸಲು ಪೊಲೀಸರು ಮತ್ತು ಭದ್ರತಾ ಪಡೆಗಳು ಹರಸಾಹಸ ನಡೆಸಬೇಕಾಯಿತು. 

ಇಂದು ಪತ್ತೆಯಾದ ಹತ ಉಗ್ರನನ್ನು ಶೋಪಿಯಾನ್‌ನ ಜಾಮ್‌ನಗರೀ ಗ್ರಾಮದ ನಿವಾಸಿಯಾಗಿರುವ ಶಾಹೀದ್‌ ಅಹ್ಮದ್‌ ದಾರ್‌ ಎಂದು ಗುರುತಿಸಲಾಗಿದೆ. ಸೇನೆಯ ಗುಂಡಿಗೆ ಬಲಿಯಾದ ಪೌರರನ್ನು ಇನ್ನಷ್ಟೇ ಗುರುತಿಸಬೇಕಾಗಿದೆ.

ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಗೆ ತಡೆಒಡ್ಡಿದವರು ಲಷ್ಕರ್‌ ಉಗ್ರಸಂಘಟನೆಯ ಮೇಲ್ಪದರದ ಕಾರ್ಯಕರ್ತರಾಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ. ಮೃತ ಪೌರರಲ್ಲಿ ಓರ್ವನನ್ನು 24ರ ಹರೆಯದ ಗೌಹರ್‌ ಅಹ್ಮದ್‌ ಲೋನ್‌ ಎಂದು ಸ್ಥಳೀಯರು ಗುರುತಿಸಿದ್ದಾರೆ. ಆತನ ಶವ ಗುಂಡಿನ ಕಾಳಗ ನಡೆದಿದ್ದ ತಾಣಕ್ಕೆ ಸಮೀಪ ವ್ಯಾಗನ್‌ ಆರ್‌ ಕಾರಿನಲ್ಲಿ ಪತ್ತೆಯಾಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next