1950ರ ದಶಕದಲ್ಲಿ ಶ್ರೀಕೃಷ್ಣ ಮಠ – ಅಷ್ಟಮಠಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಪೇಜಾವರ ಶ್ರೀಗಳ ಮಾತಿನಲ್ಲಿ ಅರಿಯಬಹುದು. ಶ್ರೀಪಾದರ ಮೊದಲ ಪರ್ಯಾಯದ ಅವಧಿ 1952-53. ಅದಕ್ಕೂ ಹಿಂದಿನ ವರ್ಷಗಳಲ್ಲಿ ರೇಶನ್ ಇತ್ತು. ಅಂದರೆ ಊಟಕ್ಕೆ ಬೇಕಾದ ಅಕ್ಕಿಯ ಸರಬರಾಜು- ವಿತರಣೆಗೂ ನಿಯಂತ್ರಣವಿತ್ತು. ಆಹಾರ ಧಾನ್ಯದ ಪೂರೈಕೆ ಇರಲಿಲ್ಲ.
ಶ್ರೀಗಳ ಮೊದಲ ಪರ್ಯಾಯದ ಅವಧಿಯಲ್ಲಿ ಆ ನಿರ್ಬಂಧ ಹೋಯಿತು. ಆಗ ಈಗಿನಂತೆ ಹೊರಗಿನ ಯಾತ್ರಿಕರು ಬರುತ್ತಿರಲಿಲ್ಲ. ಬಂದವರಿಗೆ ಊಟ ಒದಗಿಸುವುದೇ ಆ ಕಾಲದಲ್ಲಿ ಮಠಕ್ಕೆ ಬಹಳ ದೊಡ್ಡ ಖರ್ಚು. ಊಟಕ್ಕೆ ಬರುವವರಿಗೂ ಹಾಗೆಯೇ, ಒಂದು ಹೊತ್ತಿನ ಊಟ ಮಠದಲ್ಲಿ ಆದರೆ ಉಳಿತಾಯ.
ಆದರೆ ಮಠದ ಆಡಳಿತದ ದೃಷ್ಟಿಯಿಂದ ಇದೊಂದು ಕೇವಲ ಖರ್ಚಿನ ಬಾಬ್ತು ಎಂದಿತ್ತು. ಆಗ ಪರ್ಯಾಯ ಪೀಠವೇರುವ ಮಠದ ಯೋಜನೆಗಳೆಂದರೆ ಕಟ್ಟಡಗಳನ್ನು ಕಟ್ಟುವುದು ಇರಲಿಲ್ಲ. ಯಾತ್ರಿಕರು, ಭಕ್ತರಿಗೆ ಅನ್ನಪ್ರಸಾದ ನೀಡುವುದೇ ದೊಡ್ಡ ಯೋಜನೆ.
ಪ್ರಥಮ ಪರ್ಯಾಯ ಕಾಲದಲ್ಲಿ ಪೇಜಾವರ ಶ್ರೀಗಳು ಆಗುಂಬೆಯಿಂದ ಕಷ್ಟಪಟ್ಟು ಅಕ್ಕಿ ತರಿಸಬೇಕಾಯಿತು. ಪೀಠದಿಂದ ನಿರ್ಗಮಿಸುವಾಗ ಶ್ರೀಮಠಕ್ಕೆ 2 ಲಕ್ಷ ರೂ. ಗಳಷ್ಟು ಸಾಲವಾಯಿತು. ಇದು ಆ ಕಾಲದಲ್ಲಿ ದೊಡ್ಡ ಮೊತ್ತದ ಸಾಲ. ಆಗ ಮಠಗಳ ಮೇಲೆ ಸರಕಾರದ್ದೂ ನಿಯಂತ್ರಣವಿತ್ತು.
ಈಗ ಯಾತ್ರಿಕರು, ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಕೆಲವು ಬಾರಿ 25 ಸಾವಿರ ಜನರು ಊಟ ಮಾಡುವುದಿದೆ. ಈಗ ಸಾಲ ಇಲ್ಲ. ಬಂದ ಹಣ ಅಲ್ಲಿಂದಲ್ಲಿಗೆ ಸರಿಯಾಗುತ್ತದೆ. ಸಾಲ ಮಾಡಬೇಕಾದ ಪರಿಸ್ಥಿತಿ ಇಲ್ಲ. ಶ್ರೀಕೃಷ್ಣ ಮಠಕ್ಕೆ ಬಂದ ಹಣದಿಂದಲೇ ಮೂಲ ಸೌಕರ್ಯ, ಅಭಿವೃದ್ಧಿಗಳನ್ನು ಮಾಡಬಹುದಾಗಿದೆ.
ಇದೇ ವೇಳೆಗೆ ಆಗಿನ ಆಸ್ತಿಪಾಸ್ತಿ ಈಗ ಯಾವುದೂ ಇಲ್ಲ. ಆಗ ಒಂದೊಂದು ಮಠಕ್ಕೆ ಮೂರ್‍ನಾಲ್ಕು ಸಾವಿರ ಅಕ್ಕಿ ಮುಡಿ ಬರುವಷ್ಟು ಆಸ್ತಿಗಳಿದ್ದವು. ಈಗ ಇವು ಯಾವುದೂ ಇಲ್ಲ. ಆಗ ಅಕ್ಕಿಯ ಸಾಮರ್ಥ್ಯವಿದ್ದರೂ ಅದಕ್ಕೆ ಪೂರಕವಾಗಿ ಬೇಕಾದ ಹಣಕಾಸು ಸಾಮರ್ಥ್ಯವಿರಲಿಲ್ಲ.
ಆಗ ಪೇಜಾವರ ಮಠಕ್ಕೆ 3,000 ಅಕ್ಕಿ ಮುಡಿ ಬರುತ್ತಿತ್ತು. ಆಗ ಸೇವೆ ಈಗಿನಂತೆ ಬರುತ್ತಿರಲಿಲ್ಲ. 3,000 ಅಕ್ಕಿ ಮುಡಿಯಿಂದ ಪೇಜಾವರ ಮಠದ ಖರ್ಚು ನಡೆಯುತ್ತಿತ್ತೇ ವಿನಾ ಶ್ರೀಕೃಷ್ಣಮಠದ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಸಾಲ ಮಾಡಬೇಕಾಗುತ್ತಿತ್ತು ಎಂದು ಶ್ರೀಗಳು ಹೇಳುತ್ತಿದ್ದರು.