ಮಂಗಳೂರು: ಮನೆ ನಿರ್ಮಿಸಲು ಸಹಾಯ ದೊರಕಿಸಿಕೊಡುವುದಾಗಿ ಹೇಳಿ ವ್ಯಕ್ತಿಯೋರ್ವ ಮಹಿಳೆಯ ಚಿನ್ನಾಭರಣ ಪಡೆದು ವಂಚಿಸಿದ ಘಟನೆ ನಡೆದಿದೆ.
ಆತೀಕಾ ಎಂಬವರನ್ನು ಮಾ.26ರಂದು ತೊಕ್ಕೊಟ್ಟು ರೈಲ್ವೆ ಹಳಿಯ ಬಳಿ ಭೇಟಿಯಾದ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸು ತನ್ನ ಹೆಸರು ರಶೀದ್ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದ.
ಅನಂತರ ಅದೇ ದಿನ ಆತೀಕಾ ಅವರು ವಾಸವಿರುವ ಬಾಡಿಗೆ ಮನೆಗೆ ಬಂದಿದ್ದ ರಶೀದ್ “ನೀವು ಇಷ್ಟು ಬಾಡಿಗೆ ಕೊಟ್ಟು ಈ ಮನೆಯಲ್ಲಿ ಇರುತ್ತೀರಾ, ನೀವು ಬೇರೆ ಮನೆ ಮಾಡಲು ನಾನು ವ್ಯವಸ್ಥೆ ಮಾಡುತ್ತೇನೆ. ನಾಳೆ ಬಂದರ್ ಮಸೀದಿಯಲ್ಲಿ ನನಗೆ ಸಿಗಬೇಕು” ಎಂದು ಹೇಳಿ ಎರಡು ಮೊಬೈಲ್ ಸಂಖ್ಯೆಗಳನ್ನು ನೀಡಿ ಹೋಗಿದ್ದ. ಮಾ.27ರಂದು ಮಧ್ಯಾಹ್ನ ಆತೀಕಾ ಅವರು ಬಂದರ್ ಮಸೀದಿಗೆ ಬಂದಾಗ ಅವರನ್ನು ರಶೀದ್ ಮಧ್ಯಾಹ್ನ 1.45ಕ್ಕೆ ಫಳ್ನೀರ್ ರಸ್ತೆಯ ಹೊಟೇಲ್‌ನ ರೂಮಿಗೆ ಕರೆದುಕೊಂಡು ಹೋಗಿ “ಈಗ ಶೇಖ್‌ನ ಹೆಂಡತಿ ಬರುತ್ತಾರೆ.
ನಿನ್ನ ಮೈಮೇಲಿರುವ ಚಿನ್ನಾಭರಣ ನೋಡಿದರೆ ಅವರು ಸಹಾಯ ಮಾಡುವುದಿಲ್ಲ. ಅದನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ” ಎಂದು ಹೇಳಿದ. ಆಗ ಆತೀಕಾ ಅವರು ಅವರ ಮೈಮೇಲಿದ್ದ ಚಿನ್ನದ ಕಿವಿಯೋಲೆ, ಉಂಗುರ, ಬಳೆ ಇತ್ಯಾದಿಗಳನ್ನು ನೀಡಿದರು. ಬಳಿಕ ಅಲ್ಲಿಂದ ಮತ್ತೂಂದು ಹೊಟೇಲ್‌ಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿ ಶೇಖ್‌ನ ಪತ್ನಿಯನ್ನು ಕರೆದುಕೊಂಡು ಬರುವುದಾಗಿ ಹೇಳಿ ರಶೀದ್ ಹೊರಗೆ ಹೋಗಿದ್ದ. ಅನಂತರ ವಾಪಸ್ ಬಂದಿಲ್ಲ. ಆರೋಪಿ ರಶೀದ್ ಸುಮಾರು 2 ಲ.ರೂ. ಮೌಲ್ಯದ ಚಿನ್ನಾಭರಣವನ್ನು ಪಡೆದು ವಂಚಿಸಿರುವುದಾಗಿ ಆತೀಕಾ ಅವರು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.