Advertisement

ನೋಟು ಅಮಾನ್ಯ ನಂತರ 2 ಲಕ್ಷ ನಕಲಿ ಕಂಪೆನಿ ಪತ್ತೆ

08:00 AM Aug 17, 2017 | Harsha Rao |

ಹೊಸದಿಲ್ಲಿ: ನವೆಂಬರ್‌ನಲ್ಲಾದ ನೋಟು ಅಮಾನ್ಯದ ನಂತರ ತಮ್ಮಲ್ಲಿರುವ ಅಕ್ರಮ ಹಣವನ್ನು ಬಚ್ಚಿಡುವ ಪ್ರಯತ್ನವಾಗಿ ದೇಶದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳು ತಲೆಯೆತ್ತಿರುವ ಆಘಾತಕಾರಿ ಅಂಶ ಬಯಲಾಗಿದೆ. ಈ ಎಲ್ಲಾ ಕಂಪೆನಿಗಳನ್ನು ಮುಚ್ಚುವಂತೆ ಕೇಂದ್ರ ಸರಕಾರ ಆದೇಶವನ್ನೂ ನೀಡಿದೆ.

Advertisement

ಕಪ್ಪು ಹಣದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ದೇಶದಾದ್ಯಂತ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ್ದರು. ಈ ವೇಳೆ ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ತೊಡಗಿದ ಕಾಳಧನಿಕರಿಗೆ ನಕಲಿ ಕಂಪೆನಿ ಸೃಷ್ಟಿಸುವ ಐಡಿಯಾ ಹೊಳೆದಿದೆ. ಅದರಂತೆ 2016ರ ನವೆಂಬರ್‌ನಿಂದ ಈಚೆಗೆ ದೇಶದಾದ್ಯಂತ 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳು ಹುಟ್ಟಿಕೊಂಡಿದ್ದು, ಈ ಕಂಪೆನಿಗಳ ಹೆಸರಲ್ಲಿ ವಿವಿಧ ಬ್ಯಾಂಕ್‌ಗಳಲ್ಲಿ ಹಣ ಇರಿಸಲಾಗಿದೆ.

ಪ್ರಸ್ತುತ ಅಕ್ರಮ ಸಿರಿವಂತರ ಈ ಪಿತೂರಿ ತಡೆಯಲು ಮುಂದಾಗಿರುವ ಪ್ರಧಾನಿಗಳ ಕಾರ್ಯಾಲಯ, ಕಾನೂನು ಜಾರಿ ಮತ್ತು ಆದಾಯ ತೆರಿಗೆ ಇಲಾಖೆಗಳ ಉನ್ನತ ಅಧಿಕಾರಿಗಳ ತಂಡವೊಂದನ್ನು ರಚಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಪತ್ತೆಯಾಗಿರುವ 2 ಲಕ್ಷಕ್ಕೂ ಅಧಿಕ ನಕಲಿ ಕಂಪೆನಿಗಳನ್ನು ಮುಚ್ಚಿಸುವಂತೆ ಕಳೆದ ತಿಂಗಳೇ ಸರಕಾರ ಆದೇಶಿಸಲಾಗಿದ್ದು, ಈಗಾಗಲೇ ಸ್ಥಗಿತಗೊಂಡಿವೆ. 

ಚಾಲ್ತಿಯಲ್ಲಿರುವ ವ್ಯವಹಾರ ಅಥವಾ ಆಸ್ತಿಯನ್ನು ಹೊಂದಿರದ ಈ ರೀತಿಯ ನಕಲಿ ಕಂಪೆನಿಗಳ ಪತ್ತೆ ಹಾಗೂ ಅವುಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡಿರುವುದು ನೋಟು ಅಮಾನ್ಯ ಕ್ರಮದ ಸ್ಪಷ್ಟ ಯಶಸ್ಸು ಎಂದು ಕೇಂದ್ರ ಹೇಳಿದೆ. “ಕಪ್ಪು ಹಣದ ವಿರುದ್ಧ ಯುದ್ಧ ಸಾರಿದ್ದು, ಪ್ರಸ್ತುತ ಕೈಗೊಂಡಿರುವ ಶಿಸ್ತು ಕ್ರಮ ನಕಲಿ ಕಂಪೆನಿಗಳಿಗೆ ಮಾರಕವಾಗಿ ಪರಿಣಮಿಸಲಿದೆ,’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next