Advertisement

ಕಡ್ಯ ಕೊಣಾಜೆ-ರೆಂಜಿಲಾಡಿ ರಸ್ತೆಗೆ ಬೇಕಿದೆ ಕಾಯಕಲ್ಪ

12:21 AM Aug 31, 2019 | Sriram |

ಕಲ್ಲುಗುಡ್ಡೆ: ಕಡಬ ತಾಲೂಕಿನ ಕಡ್ಯ ಕೊಣಾಜೆ ಗ್ರಾಮದ ಕೊಣಾಜೆಯಿಂದ ರೆಂಜಿಲಾಡಿ ಗ್ರಾಮದ ಮಾರಪ್ಪೆ ವರೆಗಿನ ಸಾರ್ವಜನಿಕ ರಸ್ತೆ ತೀರಾ ಹದಗೆಟ್ಟು ಸಂಚಾರ ದುಸ್ತರವಾಗಿದ್ದು, ರಸ್ತೆ ಅಭಿವೃದ್ಧಿ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

ಕೊಣಾಜೆ ಪೇಟೆಯಿಂದ ಕಲ್ಲುಗುಡ್ಡೆ ರಸ್ತೆಯ ಸ್ವಲ್ಪ ದೂರದ ವರೆಗೆ ಹಲವು ವರ್ಷಗಳ ಹಿಂದೆ ಡಾಮರು ಕಂಡಿದ್ದ ರಸ್ತೆ ಈಗ ಕಿತ್ತು ಹೋಗಿದೆ. ಬಳಿಕ ರೆಂಜಿಲಾಡಿ ಗ್ರಾಮದ ಮಾರಪ್ಪೆ ಎಂಬಲ್ಲಿ ವರೆಗೆ ಸುಮಾರು 2 ಕಿ.ಮೀ. ಮಣ್ಣಿನ ರಸ್ತೆಯಾಗಿಯೇ ಉಳಿದಿದೆ. ಮಳೆಗಾಲದಲ್ಲಿ ಈ ರಸ್ತೆ ಕೆಸರಿನ ಹೊಂಡದಂತಾಗುತ್ತದೆ. ದ್ವಿಚಕ್ರ ವಾಹನ ಸವಾರರು, ಚಾಲಕರು ಸಂಚರಿಸಲು ಕಷ್ಟಪಡುತ್ತಿದ್ದಾರೆ. ಈ ರಸ್ತೆ ಕಲ್ಲುಗುಡ್ಡೆ ಪೇಟೆಯನ್ನು ಸಂಪರ್ಕಿಸುತ್ತಿದ್ದು, ಇಚ್ಲಂಪಾಡಿ – ಕಲ್ಲುಗುಡ್ಡೆ – ಮಾರಪ್ಪೆ ವರೆಗೆ ಸಡಕ್‌ ಯೋಜನೆ ಅಡಿಯಲ್ಲಿ ಡಾಮರು ಕಾಮಗಾರಿ ಆಗಿದೆ. ಮಾರಪ್ಪೆಯಿಂದ ಕೊಣಾಜೆ ವರೆಗೆ ರಸ್ತೆ ಡಾಮರು ಕಂಡಿಲ್ಲ.

ಗ್ರಾಮಸಭೆಯಲ್ಲಿ ಪ್ರಸ್ತಾವ
ಕೊಣಾಜೆಯಿಂದ ಕಲ್ಲುಗುಡ್ಡೆ ಹಾಗೂ ನೆಲ್ಯಾಡಿ, ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಈ ರಸ್ತೆಯು ಮಾರಪ್ಪೆ ವರೆಗೆ ವಾಹನ ಸಂಚಾರಕ್ಕೆ ದುಸ್ತರವಾಗಿದ್ದು, ದಿನನಿತ್ಯ ನೂರಾರು ಮಂದಿ ಈ ರಸ್ತೆಯಲ್ಲಿ ಕಡಬ, ಕಲ್ಲುಗುಡ್ಡೆ, ನೆಲ್ಯಾಡಿಗೆ ಶಾಲಾ, ಕಾಲೇಜು ಸೇರಿದಂತೆ ದಿನನಿತ್ಯದ ಕೆಲಸ ಕಾರ್ಯಗಳಿಗೆ ಪ್ರಯಾಣಿಸುವವರು ಈ ಮಾರ್ಗವಾಗಿಯೇ ಸಂಚರಿಸುತ್ತಿದ್ದು, ಈ ರಸ್ತೆ ದುರಸ್ತಿಗೊಂಡು ಡಾಮರು ಕಾಮಗಾರಿ ನ ಡೆಸಿಕೊಡುವಂತೆ ಕಡ್ಯ-ಕೊಣಾಜೆ ಗ್ರಾಮಸಭೆಯಲ್ಲಿಯೂ ಗ್ರಾಮಸ್ಥರು ಆಗ್ರಹಿಸಿದ್ದರು.

ಸೇತುವೆ ನಿರ್ಮಾಣವಾಗಿದೆ
ಕಲ್ಲುಗುಡ್ಡೆ-ಕೊಣಾಜೆ ರಸ್ತೆಯ ಉದೆ ಕಟ್ಟದಲ್ಲಿ ತೋಡಿಗೆ ಕೆಲ ವರ್ಷಗಳ ಹಿಂದೆ ಸೇತುವೆ ನಿರ್ಮಾಣಗೊಂಡಿದ್ದು, ಇದೀಗ ಸೇತುವೆ ಬಳಿ ಸ್ವಲ್ಪ ದೂರದವರೆಗೆ ಕಡ್ಯ ಕೊಣಾಜೆ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅನುದಾನ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದ್ದು, ಉಳಿದೆಡೆ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು, ಈ ರಸ್ತೆಯನ್ನು ಆದಷ್ಟು ಬೇಗ ದುರಸ್ತಿಗೊಳಿಸುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಇಚ್ಲಂಪಾಡಿ-ಕೊಣಾಜೆ ರಸ್ತೆಯ ಇಚ್ಲಂಪಾಡಿ-ಕಲ್ಲುಗುಡ್ಡೆ- ಮಾರಪ್ಪೆಯವರೆಗೆ ಗ್ರಾಮ ಸಡಕ್‌ನಲ್ಲಿ ಡಾಮರು ಕಾಮಗಾರಿ ನಡೆಸಲಾಗಿದ್ದು, ಮಾರಪ್ಪೆಯಿಂದ ಮುಂದಕ್ಕೆ ರಸ್ತೆಗೆ ಡಾಮರು ಕಾಮಗಾರಿಗೆ ಅನುದಾನ ಕಲ್ಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.
-ಪಿ.ಪಿ. ವರ್ಗೀಸ್‌ ಜಿ.ಪಂ. ಸದಸ್ಯ, ಕಡಬ

Advertisement

-ದಯಾನಂದ ಕಲ್ನಾರ್‌

Advertisement

Udayavani is now on Telegram. Click here to join our channel and stay updated with the latest news.

Next