ಮಂಡ್ಯ: ಸರಕಾರಿ ಆಸ್ಪತ್ರೆ ಮಿಮ್ಸ್‌ನಲ್ಲಿ ನಡೆದ ಕಳವಳಕಾರಿ ವಿದ್ಯಮಾನವೊಂದರಲ್ಲಿ 2 ಶಿಶುಗಳು ಸಾವನ್ನಪ್ಪಿದ್ದು , 6 ಶಿಶುಗಳು ಅಸ್ವಸ್ಥಗೊಂಡಿದ್ದು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಚ್ಚು ಮದ್ದು ನೀಡಿದ ಬಳಿಕ ಶಿಶುಗಳು ಸಾವನ್ನಪ್ಪಿವೆ ಮತ್ತು ಅಸ್ವಸ್ಥಗೊಂಡಿವೆ ಎಂದು ಪೋಷಕರು ಆರೋಪ ಮಾಡಿದ್ದು ಮಿಮ್ಸ್ ಎದುರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ.
ಚುಚ್ಚು ಮದ್ದು ತೆಗೆದುಕೊಂಡಿದ್ದ ಚಿಂದಗಿರಿ ದೊಡ್ಡಿ ಗ್ರಾಮದ ಒಂದೂರವರೆ ಮತ್ತು 2 ತಿಂಗಳ ಶಿಶುಗಳು ಅಸ್ವಸ್ಥ ಗೊಂಡು ಸಾವನ್ನಪ್ಪಿವೆ. ಇನ್ನೂ 6 ಶಿಶುಗಳು ಅಸ್ವಸ್ಥಗೊಂಡಿದ್ದು ಚಿಕಿತ್ಸೆ ಮುಂದುವರಿದಿದ್ದು ಪೋಷಕರು ತೀವ್ರ ಆತಂಕಿತರಾಗಿ ಕಣ್ಣೀರಿಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆರೋಗ್ಯ ಅಧಿಕಾರಿ ಮೋಹನ್ ಕುಮಾರ್ ‘ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎನ್ನುವುದು ಮರಣೋತ್ತರ ಪರೀಕ್ಷೆ ಬಳಿಕ ತಿಳಿದು ಬರಬೇಕಿದೆ’ ಎಂದಿದ್ದಾರೆ.
ಮಗುವಿಗೆ 5 ಕಾಯಿಲೆಗಳಾದ ಡಿಪಿಟಿ , ಹೆಪಟೈಟಿಸ್ ಬಿ, ನ್ಯೂಮೋನಿಯಾ , ಜಾಂಡೀಸ್ ಬರದಂತೆ ಪೆಂಟಾ ಇಂಜೆಕ್ಷನ್(5 ಇನ್ ಒನ್) ನೀಡಲಾಗುತ್ತದೆ. ಮೃತಪಟ್ಟಿರುವ ಮತ್ತು ಅಸ್ವಸ್ಥ ಮಕ್ಕಳೆಲ್ಲರೂ ಈ ಇಂಜೆಕ್ಷನ್ ಪಡೆದಿದ್ದವು ಎಂದು ತಿಳಿದು ಬಂದಿದೆ.
ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಂಜುಶ್ರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆರೋಗ್ಯ ಇಲಾಖೆಯ ಅಧಿಕಾರಿಗಳು ಚಚ್ಚುಮದ್ದುಗಳ ಮತ್ತು ಔಷಧಿಗಳ ಪರಿಶೀಲನೆಯನ್ನು ನಡೆಸಿ ಪರೀಕ್ಷೆಗಾಗಿ ರವಾನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.