Advertisement

ISRO ನೇಮಕ ಪರೀಕ್ಷೆಯಲ್ಲಿ ಅಕ್ರಮ: ಹರ್ಯಾಣದ ಇಬ್ಬರ ಬಂಧನ

08:19 PM Aug 21, 2023 | Team Udayavani |

ತಿರುವನಂತಪುರ:ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ(ವಿಎಸ್‌ಎಸ್‌ಸಿ)ಕ್ಕೆ ತಾಂತ್ರಿಕ ಸಿಬ್ಬಂದಿ ನೇಮಕಕ್ಕಾಗಿ ಇಸ್ರೋ ಆಯೋಜಿಸಿದ್ದ ಪರೀಕ್ಷೆಯಲ್ಲಿ ವಂಚನೆ ಎಸಗಿದ ಹರ್ಯಾಣದ ಇಬ್ಬರನ್ನು ಕೇರಳದ ತಿರುವನಂತಪುರದಲ್ಲಿ ಬಂಧಿಸಲಾಗಿದೆ.

Advertisement

ಪರೀಕ್ಷೆಗೆ ಉತ್ತರ ಬರೆಯುವ ವೇಳೆ ಅಕ್ರಮವೆಸಗಿದ ಆರೋಪದ ಮೇರೆಗೆ ಎರಡು ಪ್ರತ್ಯೇಕ ಪರೀಕ್ಷಾ ಕೇಂದ್ರಗಳಿಂದ ಇವರಿಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಅಲ್ಲದೆ,  ನೈಜ ಪರೀಕ್ಷಾರ್ಥಿಗಳ ಬದಲಿಗೆ ಇವರಿಬ್ಬರೂ ಪರೀಕ್ಷೆ ಬರೆಯುತ್ತಿದ್ದರು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಅಕ್ರಮ ಹಿನ್ನೆಲೆಯಲ್ಲಿ ಉತ್ತರ ಭಾರತದ ಇನ್ನೂ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಈ ಬೆಳವಣಿಗೆಗಳ ಕುರಿತು ವಿಎಸ್‌ಎಸ್‌ಸಿಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಪರೀಕ್ಷೆಯನ್ನು ರದ್ದುಗೊಳಿಸಬೇಕೇ, ಬೇಡವೇ ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.

ಬಂಧಿತರು ಮೊಬೈಲ್‌ ಫೋನ್‌ ಕ್ಯಾಮೆರಾಗಳ ಮೂಲಕ ಪ್ರಶ್ನೆ ಪತ್ರಿಕೆಯ ಫೋಟೋ ತೆಗೆದು, ಮೂರನೇ ವ್ಯಕ್ತಿಗಳಿಗೆ ರವಾನಿಸುತ್ತಿದ್ದರು. ಅವರು ಬ್ಲೂಟೂಥ್‌ ಮೂಲಕ ಉತ್ತರವನ್ನು ಹೇಳಿಕೊಡುತ್ತಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next