ಬೆಂಗಳೂರು: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‌ಗೆ ಎರಡನೇ ದಿನ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ಬೆಂಗಳೂರಿನಲ್ಲಿ 58 ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ್ದಾರೆ.
ಬಳ್ಳಾರಿಯಲ್ಲೂ 4 ಬಸ್‌ಗಳಿಗೆ ಹಾನಿಯಾಗಿದೆ. ನಗರದಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿಎಂಟಿಸಿ ಸಂಚಾರ ಸ್ಥಗಿತಗೊಳಿಸಲಾಗಿತ್ತಾದರೂ, ಯಾವುದೇ ಕಚೇರಿ ಅಥವಾ ಅಂಗಡಿ ಮುಂಗಟ್ಟು ಮುಚ್ಚಿರಲಿಲ್ಲ. ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ಬೆಳಗ್ಗೆ 8 ಗಂಟೆ ನಡುವಿನಲ್ಲಿ ಹೆಬ್ಟಾಳ, ಕಸ್ತೂರಿ ನಗರ, ಕೆಂಗೇರಿ, ಬಾಪೂಜಿ ನಗರ, ಮೂಡಲ ಪಾಳ್ಯ, ಕುಂಬಳಗೋಡು ಸೇರಿ ಹಲವು ಪ್ರದೇಶಗಳಲ್ಲಿ ಕಿಡಿಗೇಡಿಗಳು 46 ಬಿಎಂಟಿಸಿ ಬಸ್ ಹಾಗೂ ಕೆಎಸ್‌ಆರ್‌ಟಿಸಿಯ 12 ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು ಎಂದಿನಂತೆ ಕಾರ್ಯ ನಿರ್ವಹಿಸಿದ್ದವು.ಶಾಲಾ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಮುಂದೂಡಿದ್ದರೂ,ಬಹುತೇಕ ಜಿಲ್ಲೆಗಳಲ್ಲಿ ಶೈಕ್ಷಣಿಕ ಕಾರ್ಯ ಚಟುವಟಿಕೆ ಹಾಗೂ ತರಗತಿಗಳು ಎಂದಿನಂತೆ ನಡೆದಿದೆ. ಬೆಂಗಳೂರು ನಗರದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಬುಧವಾರ ಕಾರ್ಯನಿರ್ವಹಿಸಿವೆ.
ಗಾರ್ಮೆಂಟ್‌ಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಗಳವಾರ ಬಹುತೇಕ ಎಲ್ಲ ಗಾರ್ಮೆಂಟ್‌ಗೆ ರಜಾ ನೀಡಲಾಗಿತ್ತು.ಆದರೆ, ಬುಧವಾರ ಎಂದಿನಂತೆ ಕಾರ್ಯನಿರ್ವಹಿಸಿವೆ.
ಕೆಎಸ್‌ಆರ್‌ಟಿಸಿಗೆ ಕೋಟ್ಯಂತರ ನಷ್ಟ
ಭಾರತ್ ಬಂದ್ ಹಾಗೂ ಕಾರ್ಮಿಕರ ಮುಷ್ಕರದ ಪರಿಣಾಮವಾಗಿ ಕೆಎಸ್‌ಆರ್‌ಟಿಸಿಯ 2,171 ಬಸ್ ರದ್ದಾಗಿ, 2.42ಕೋಟಿ ರೂ. ಹಾಗೂ ಬಸ್ ಹಾನಿಯಿಂದ 2.32 ಲಕ್ಷ ರೂ ನಷ್ಟವಾಗಿದೆ.ಬಿಎಂಟಿಸಿಗೆ ಬಸ್ ರದ್ದಾಗಿದ್ದರಿಂದ 3 ಕೋಟಿ ರೂ. ಹಾಗೂ ಬಸ್ ಹಾನಿಯಿಂದ 7.5 ಲಕ್ಷ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.