Advertisement

2 ಕೋ.ರೂ. ಬಾಕಿ ಬಿಡುಗಡೆಗೆ ಗುತ್ತಿಗೆದಾರರ ಮೊರೆ

01:28 AM Jul 30, 2019 | Team Udayavani |

ಮಂಗಳೂರು: ಕಡಿಮೆದರದಲ್ಲಿ ಆಹಾರ ನೀಡುವ ಉದ್ದೇಶದಿಂದ ಆರಂಭವಾಗಿ ಜನಪ್ರಿಯವಾಗಿದ್ದ ಇಂದಿರಾ ಕ್ಯಾಂಟೀನ್‌ಗಳು ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನುದಾನದ ಕೊರತೆಯಿಂದ ಬಡವಾಗಿದೆ. 8 ತಿಂಗಳಿಂದ ಸುಮಾರು 2 ಕೋಟಿ ರೂ. ಬರಲು ಬಾಕಿಯಿದ್ದು, ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿವೆ.

Advertisement

ಮಂಗಳೂರು ನಗರ ಪಾಲಿಕೆಯ 5.93 ಲಕ್ಷ ಜನಸಂಖ್ಯೆಯನ್ನು ಆಧರಿಸಿ ಇಲ್ಲಿ 6 ಕ್ಯಾಂಟೀನ್‌ ಮತ್ತು ಅಡುಗೆ ಕೋಣೆಯನ್ನು ಆರಂಭಿಸಲಾಗಿತ್ತು. ಆಹಾರ ಪೂರೈಕೆಗೆ ಪ್ರತಿ ತಿಂಗಳಿಗೆ ತಗಲುವ ಖರ್ಚಿನ ಶೇ. 30ರಷ್ಟು ಕಾರ್ಮಿಕ ಇಲಾಖೆ, ಉಳಿದ ಶೇ.70ರಷ್ಟನ್ನು ಮಂಗಳೂರು ಪಾಲಿಕೆಯು ಭರಿಸ ಬೇಕಾಗಿತ್ತು. ಆದರೆ ಅನುದಾನ ಬಾರದೆ ನಿರ್ವಹಣೆ ಕಷ್ಟವಾಗುತ್ತಿದೆ.

ಸಮಸ್ಯೆಯೇಕೆ?
ಆರು ಕ್ಯಾಂಟೀನ್‌ಗಳಿಗೆ ಅನುದಾನ ದೊರೆಯದೆ ಇರುವುದರಿಂದ ಗುತ್ತಿಗೆದಾರರಿಗೆ ಸಂಕಷ್ಟ ಎದುರಾಗಿದೆ. ವಿದ್ಯುತ್‌-ನೀರಿನ ಬಿಲ್‌, ಸಿಬಂದಿ ವೇತನ ಪಾವತಿ ಮತ್ತು ಇನ್ನಿತರ ಖರ್ಚು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂಬುದು ನಿರ್ವಾಹಕರ ಅಳಲು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 2017ರ ಆಗಸ್ಟ್‌ನಲ್ಲಿ ಇಂದಿರಾಕ್ಯಾಂಟೀನ್‌ಗೆ ಚಾಲನೆ ನೀಡಿದ್ದರು. ಮುಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವೂ ಪೂರಕ ಸ್ಪಂದನೆ ನೀಡಿತ್ತು. ಆದರೆ ಮಂಗಳೂರು ಮನಪಾಮೇಯರ್‌ ಬದಲಾವಣೆ ಸೇರಿದಂತೆ ಇತರ ಆಡಳಿತಾತ್ಮಕ ಕಾರಣಗಳಿಂದ ಈ ಭಾಗದ ಇಂದಿರಾ ಕ್ಯಾಂಟೀನ್‌ಗಳಿಗೆ ಮಾತ್ರ 8 ತಿಂಗಳುಗಳಿಂದ ಅನುದಾನ ದೊರೆಯುತ್ತಿಲ್ಲ. ಈಗ ಬಿಜೆಪಿ ಸರಕಾರ ಅಧಿಕಾರ ಸ್ವೀಕರಿಸಿದ್ದು, ಯಾವ ರೀತಿಯ ಬೆಂಬಲ ನೀಡಲಿದೆ ಎಂಬ ಪ್ರಶ್ನೆ ಗುತ್ತಿಗೆದಾರರಲ್ಲಿ ಮೂಡಿದೆ.

ಗ್ರಾಹಕರ ಸಂಖ್ಯೆ ಕ್ಷೀಣ ?
ಇಂದಿರಾ ಕ್ಯಾಂಟೀನ್‌ ಪ್ರಾರಂಭದಲ್ಲಿ ಗ್ರಾಹಕರ ಸರತಿಯ ಸಾಲೇ ಕಂಡುಬರುತ್ತಿತ್ತು. ಊಟ ಮತ್ತು ಉಪಾಹಾರಜನಪ್ರಿಯವಾಗಿದ್ದವು. ಆದರೆ ಇತ್ತೀಚೆಗೆ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ ರುವ ಕ್ಯಾಂಟಿನ್‌ ಮೇಲ್ವಿಚಾರಕರು, ಗ್ರಾಹಕರ ಸಂಖ್ಯೆ ಕಡಿಮೆಯಾಗಿಲ್ಲ, ಜನರ ಆಸಕ್ತಿಯಂತೆ ಮೆನು ಬದಲಾಯಿಸಿ ಉತ್ತಮ ಆಹಾರ ನೀಡ ಲಾಗುತ್ತಿದೆ ಎನ್ನುತ್ತಾರೆ.

Advertisement

ಎಲ್ಲೆಲ್ಲಿ ಇಂದಿರಾ ಕ್ಯಾಂಟೀನ್‌?
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಲೇಡಿಗೋಶನ್‌ ಮುಂಭಾಗ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮೀಪ (ಕ್ಯಾಂಟೀನ್‌ ಮತ್ತು ಮಾಸ್ಟರ್‌ ಕಿಚನ್‌), ಕಾವೂರು, ಸುರತ್ಕಲ್‌ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪ, ಪಂಪ್‌ವೆಲ್‌ ಮತ್ತು ಉಳ್ಳಾಲದಲ್ಲಿ ಒಂದು ಕ್ಯಾಂಟೀನ್‌ ಇವೆ. ಇನ್ನುಳಿದಂತೆ ಸುಳ್ಯದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಚಾಲನೆ ದೊರೆತಿಲ್ಲ. ಬೆಳ್ತಂಗಡಿಯಲ್ಲಿ ಕ್ಯಾಂಟೀನ್‌ ಸ್ಥಾಪನೆಗೆ ಶಿಲಾನ್ಯಾಸವಾಗಿದೆ. ಬಂಟ್ವಾಳದಲ್ಲಿ ಆರಂಭವಾಗಿದೆ.

ಬಂಟ್ವಾಳದ ಇಂದಿರಾ ಕ್ಯಾಂಟೀನ್‌ಗೆ ಅನುದಾನ ಬಾಕಿ ಇಲ್ಲ ಎಂಬುದಾಗಿ ಅಲ್ಲಿನ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾರ್ಯಚರಿಸುತ್ತಿರುವ 4 ಇಂದಿರಾ ಕ್ಯಾಂಟೀನ್‌ಗಳ ಗುತ್ತಿಗೆಯನ್ನು ಬೆಂಗಳೂರು ಮೂಲದ ಗುತ್ತಿಗೆ ಸಂಸ್ಥೆ ವಹಿಸಿಕೊಂಡಿದ್ದು, ಅವರಿಗೆ ಅನುದಾನ ಕೊರತೆಯಾಗಿಲ್ಲ ಎಂದು ಸಂಸ್ಥೆಯ ಮೇಲ್ವಿಚಾರಕರು ತಿಳಿಸಿದ್ದಾರೆ.

ಅನುದಾನ ಬಂದಿಲ್ಲ
ಏಳೆಂಟು ತಿಂಗಳಿನಿಂದ ಅನುದಾನ ಬಂದಿಲ್ಲ. ಈ ಹಿಂದೆ ಒಂದೆರಡು ತಿಂಗಳು ತಡವಾಗಿ ಬರುತ್ತಿದ್ದರೂ ಸಮಸ್ಯೆ ಇರಲಿಲ್ಲ. ಈಗ ದೊಡ್ಡ ಮಟ್ಟದಲ್ಲಿ ಅನುದಾನ ಬಾಕಿ ಇದೆ. ಇದರಿಂದ ಸ್ವಲ್ಪ ಸಮಸ್ಯೆಯಾಗುತ್ತಿದೆ.
-ಪ್ರಕಾಶ್‌ ಶೆಟ್ಟಿ ಇಂದಿರಾ ಕ್ಯಾಂಟಿನ್‌ ಆಹಾರ ಪೂರೈಕೆ ಗುತ್ತಿಗೆದಾರರು

ಪರಿಶೀಲಿಸಿ ಕ್ರಮ
ಬಿಲ್‌ ಬಾಕಿ ಬಗ್ಗೆ ಈವರೆಗೆ ಗಮನಕ್ಕೆ ಬಂದಿಲ್ಲ. ಇದರ ನಿರ್ವಾಹಣೆಯ ಜವಾಬ್ದಾರಿಯನ್ನು ಮಂಗಳೂರು ಮಹಾನಗರ ಪಾಲಿಕೆ ವಹಿಸಿಕೊಂಡಿತ್ತು. ತಾಂತ್ರಿಕ ಸಮಸ್ಯೆಯಿಂದ ಸ್ವಲ್ಪ ವಿಳಂಬವಾಗಿರಬಹುದು. ಪರಿಶೀಲಿಸಲಾಗುವುದು.
– ಶಶಿಕಾಂತ ಸೆಂಥಿಲ್‌
ಜಿಲ್ಲಾಧಿಕಾರಿ, ದ.ಕ.

– ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next