Advertisement

ಸಮುದಾಯ ಭವನಕ್ಕೆ 2 ಕೋಟಿ ಅನುದಾನ

03:57 PM Mar 15, 2022 | Team Udayavani |

ರಾಣಿಬೆನ್ನೂರ: ಕರ್ನಾಟಕ ರಾಜ್ಯ ನೀರಾವರಿ ನಿಗಮದಿಂದ ಮುದೇನೂರ ಹಿರೇಮಠದ ಆವರಣದಲ್ಲಿ ಬಡವರಿಗೆ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಿಸಲು 2 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.

Advertisement

ಮುದೇನೂರ ಗ್ರಾಮದ ಹಿರೇಮಠದ ಆವರಣದಲ್ಲಿ ಕರ್ನಾಟಕ ನೀರಾವರಿ ನಿಗಮ ನಿಯಮಿತ, ಜಿಲ್ಲಾ ನಿರ್ಮಿತಿ ಕೇಂದ್ರ ಹಾಗೂ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಮುದಾಯ ಭವನ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾತ್ರಿ ನಿವಾಸ ಸೇರಿದಂತೆ ಶ್ರೀಮಠಕ್ಕೆ ತೊಂದರೆ ಆಗದಂತೆ ತುಂಗಭದ್ರಾ ನದಿ ದಂಡೆಯಲ್ಲಿ ತಡೆಗೋಡೆ ನಿರ್ಮಿಸಲಾಗುವುದು. ಮುದೇನೂರಿನ ಹಿರೇಮಠದೊಂದಿಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.

ಉಜ್ಜಯಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಮಾತನಾಡಿ, ಮುದೇನೂರು ಮುಕ್ಕುಡೇಶ್ವರ ಮುನಿಗಳು ನೆಲೆಸಿದ ಗ್ರಾಮ ದಿನಗಳು ಉರುಳಿದಂತೆ ಮುದೇನೂರು ಎಂಬ ಹೆಸರು ಬಂದಿದೆ. ಈ ಗ್ರಾಮ ಕುಮುದ್ವತಿ ಮತ್ತು ತುಂಗಭದ್ರಾ ನದಿ ಸಂಗಮವಾಗಿದೆ. ನಮ್ಮ ಪೂರ್ವಾಶ್ರಮದ ತಾತಂದಿರ ಮೊಮ್ಮಕ್ಕಳಾಗಿ ನಾನು ಮತ್ತು ಸಂಸದ ರಾಘವೇಂದ್ರ ಒಂದೇ ವೇದಿಕೆ ಸೇರಿದ್ದೇವೆ. ಅವರ ಸಹಕಾರದಿಂದ ಹಿರೇಮಠದ ಅಭಿವೃದ್ಧಿಯಾಗಲಿ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಡಾ| ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶ್ರೀ ಶೈಲ ಮತ್ತು ಉಜ್ಜಯಿನಿ ಪೀಠಗಳಿಗೆ ಇಬ್ಬರು ಜಗದ್ಗುರುಗಳನ್ನು ನೀಡಿದ ಕೀರ್ತಿ ಮುದೇನೂರು ಹಿರೇಮಠಕ್ಕೆ ಸಲ್ಲುತ್ತದೆ. ಲಿಂಗೈಕ್ಯ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯರು ಜನ್ಮ ಪಡೆದ ಮೂಲ ಹಿರೇಮಠದ ಅಭಿವೃದ್ಧಿಗಿಂತ ಶ್ರೀ ಶೈಲ ಪೀಠ ಹಾಗೂ ಭಕ್ತರ ಏಳ್ಗೆಗೆ ಒತ್ತು ನೀಡಿದ್ದರು ಎಂದರು.

Advertisement

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಚುನಾವಣೆ ಸಮಯದಲ್ಲಿ ನೀಡಿದ ಭರವಸೆಯಂತೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನೀರಾವರಿ ಯೋಜನೆಗೆ 206 ಕೋಟಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ರಾಣಿಬೆನ್ನೂರು ನಗರಾಭಿವೃದ್ಧಿಗೆ 30 ಕೋಟಿ ಅನುದಾನ ಒದಗಿಸಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದಲ್ಲದೆ ಹಿರೇಮಠದಲ್ಲಿ ಗುರು ನಿವಾಸ ನಿರ್ಮಿಸಲು 25 ಲಕ್ಷ ಅನುದಾನ ನೀಡುವುದಾಗಿ ಅವರು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಬೀರಪ್ಪ ಕರಿಯಣ್ಣನವರ, ಉಪಾಧ್ಯಕ್ಷೆ ಮಂಜುಳಾ ಪಾಟೀಲ, ಸದಸ್ಯರಾದ ರಾಜಶೇಖರಗೌಡ ಗಂಗನಗೌಡ್ರ, ನಾಗರಾಜಯ್ಯ ಬಿಳಸನೂರಮಠ, ಪ್ರಶಾಂತ ಮಣಕೂರ, ಹಿರಿಯಮ್ಮ ತಳವಾರ, ರೇಖಾ ಪುಟ್ಟಕ್ಕನವರ, ನಗರಸಭೆ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ಹುಬ್ಬಳ್ಳಿ ವಾಕರಸಾ ನಿಗಮ ನಿರ್ದೇಶಕ ಸಂತೋಷಕುಮಾರ ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ ಇನ್ನಿತರರಿದ್ದರು.

ಹಿರೇಮಠದ ಅಭಿವೃದ್ಧಿಗೆ ಈಗ ಕಾಲ ಕೂಡಿ ಬಂದಿದೆ. ವಾಗೀಶ ಪಂಡಿತಾರಾಧ್ಯರ ಮೊಮ್ಮಗ ಉಜ್ಜಯಿನಿ ಶ್ರೀಗಳು ಮೂಲಮಠದ ಅಭಿವೃದ್ಧಿಗೆ ಒಲವು ತೋರಿದ್ದಾರೆ. ಹಿರೇಮಠ ರಾಜ್ಯದ ಗಮನ ಸೆಳೆಯಲು ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ತೋರಬೇಕು.

-ಡಾ| ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಹೊನ್ನಾಳಿ ಹಿರೇಕಲ್ಮಠ

Advertisement

Udayavani is now on Telegram. Click here to join our channel and stay updated with the latest news.

Next