Advertisement

ಕೆಲಸ ಮಾಡುತ್ತಿದ್ದ ಕಂಪನಿಗೆ 2 ಕೋಟಿ ವಂಚನೆ

06:14 AM Jan 14, 2019 | Team Udayavani |

ಬೆಂಗಳೂರು: ತನ್ನದ್ದೇ ಸ್ವಂತ ಕಂಪನಿ ಸ್ಥಾಪಿಸುವ ಉದ್ದೇಶದಿಂದ, ಕೆಲಸ ಮಾಡುತ್ತಿದ್ದ ಕಂಪನಿಯ ಗ್ರಾಹಕರ ಮಾಹಿತಿ ದುರುಪಯೋಗ ಪಡಿಸಿಕೊಂಡು 2 ಕೋಟಿ ರೂ. ವಂಚಿಸಿದ ಇಬ್ಬರು ವಂಚಕರು ಮಹದೇವಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಹೊರಮಾವು ನಿವಾಸಿಗಳಾದ ಕಾರ್ತಿಕ್‌ ಶ್ರೀನಿವಾಸನ್‌ (35) ಮತ್ತು ಬಿ.ವಿ.ಪ್ರತಾಪ್‌ (32) ಬಂಧಿತರು. ಆರೋಪಿಗಳು ಐಯಾನ್‌ ಐಡಿಯಾ ಕಂಪನಿಗೆ ಸುಮಾರು 2 ಕೋಟಿ ರೂ. ವಂಚಿಸಿದ ಸಂಬಂಧ ಕಂಪನಿಯ ಹಿರಿಯ ಅಧಿಕಾರಿಗಳು ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಆರೋಪಿಗಳ ಕೃತ್ಯ ಬಯಲಾಗಿತ್ತು ಎಂದು ಪೊಲೀಸರು ಹೇಳಿದರು.

ವೈಟ್‌ಫೀಲ್ಡ್‌ನ ಇಪಿಐಪಿ ಪ್ರದೇಶದಲ್ಲಿರುವ ಐಯಾನ್‌ ಐಡಿಯಾ ಸಾಫ್ಟ್ವೇರ್‌ ಕಂಪನಿ ವಿದೇಶಿಯರು ಹಾಗೂ ಅನಿವಾಸಿ ಭಾರತೀಯರಿಗೆ ಮೆಡಿಕಲ್‌ ಹಾಗೂ ವಿಮೆ ಬಿಲ್‌ಗ‌ಳ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಯಲ್ಲಿ ಆರೋಪಿಗಳಾದ ತಮಿಳುನಾಡು ಮೂಲದ ಕಾರ್ತಿಕ್‌ ಶ್ರೀನಿವಾಸನ್‌ ಸೀನಿಯರ್‌ ಮ್ಯಾನೇಜರ್‌ ಹಾಗೂ ಪ್ರತಾಪ್‌ ಆಪರೇಷನ್‌ ಮ್ಯಾನೇಜರ್‌ ಆಗಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿದ್ದರು.

ಈ ಮಧ್ಯೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ 2017ರ ನವೆಂಬರ್‌ನಲ್ಲಿ “ಕ್ಯಾಪ್‌ಟೀವ್‌ ಮೆಡ್‌ ಸಲ್ಯೂಷನ್‌’ ಎಂಬ ಹೊಸ ಕಂಪನಿಯನ್ನು ತೆರೆದಿದ್ದರು. ಬಳಿಕ ಹೊಸ ಕಂಪನಿ ಬೆಳೆಸುವ ಉದ್ದೇಶವಿದ್ದರೂ ಆರೋಪಿಗಳ ಬಳಿ ಅಗತ್ಯ ಪ್ರಮಾಣದ ಹಣ ಇರಲಿಲ್ಲ. ಹೀಗಾಗಿ ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಗ್ರಾಹಕರ ಡಿಜಿಟಲ್‌ ಡಾಟಾ ದುರುಪಯೋಗ ಪಡಿಸಿಕೊಳ್ಳಲು ಸಂಚು ರೂಪಿಸಿದ್ದರು.

ಅದರಂತೆ 2017ರ ನವೆಂಬರ್‌ನಿಂದ 2018 ನವೆಂಬರ್‌ ಅವಧಿಯಲ್ಲಿ ಐಯಾನ್‌ ಐಡಿಯಾ ಕಂಪನಿಯ ನೂರಾರು ಮಂದಿಗೆ ತಪ್ಪು ಮಾಹಿತಿ ನೀಡಿ, ತಾವು ಸ್ಥಾಪನೆ ಮಾಡಿದ್ದ ಕ್ಯಾಪ್‌ಟೀವ್‌ ಮೆಡ್‌ ಸೆಲ್ಯೂಷನ್‌ ಕಂಪನಿ ಖಾತೆಗೆ 2 ಕೋಟಿ ರೂ. ಹಣ ವರ್ಗಾಹಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದರು.

Advertisement

ಇತ್ತೀಚೆಗೆ ಐಯಾನ್‌ ಐಡಿಯಾ ಕಂಪನಿಯು ಅನಿವಾಸಿ ಭಾರತೀಯರು ಹಾಗೂ ವಿದೇಶಿ ಗ್ರಾಹಕರಿಂದ ಹಣ ಪಾವತಿಯಾಗದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೆ, ಗ್ರಾಹಕರನ್ನು ಸಂಪರ್ಕಿಸಿದಾಗ ಪಾವತಿಸಿರುವುದಾಗಿ ಉತ್ತರಿಸಿದ್ದರು. ಇದರಿಂದ ಅನುಮಾನಗೊಂಡ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ಆರೋಪಿಗಳ ಅವ್ಯವಹಾರ ಬೆಳಕಿಗೆ ಬಂದಿತ್ತು ಎಂದು ಪೊಲೀಸರು ತಿಳಿಸಿದರು.

ವಿದೇಶದಲ್ಲಿ ಕಂಪನಿ ಬಗ್ಗೆ ಪ್ರಚಾರ: ಆರೋಪಿಗಳು ಐಯಾನ್‌ ಐಡಿಯಾ ಕಂಪನಿ ವ್ಯವಹಾರ ನಿಮಿತ್ತ ಆಗಾಗ ವಿದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ತಾವು ಸ್ಥಾಪಿಸಿರುವ ಕಂಪನಿ ಬಗ್ಗೆ ಅಲ್ಲಿನ ಗ್ರಾಹಕರಿಗೆ ಪ್ರಚಾರ ಮಾಡುತ್ತಿದ್ದರು. ಅಲ್ಲದೆ, ಮುಂದಿನ ದಿನಗಳಲ್ಲಿ ಐಯಾನ್‌ ಐಡಿಯಾ ಕಂಪನಿ ಖಾತೆ ಬದಲಿಗೆ ಕ್ಯಾಪ್‌ಟೀವ್‌ ಮೆಡ್‌ ಸೆಲ್ಯೂಷನ್‌ ಖಾತೆಗೆ ಹಣ ವರ್ಗಾಯಿಸುವಂತೆ ಸೂಚಿಸಿದ್ದರು.

ಕೆಲ ಗ್ರಾಹಕರನ್ನು ಇ-ಮೇಲ್‌ ಹಾಗೂ ದೂರವಾಣಿ ಮೂಲಕವೂ ಸಂಪರ್ಕಿಸಿದ್ದರು. ಆರೋಪಿಗಳೇ ಕಂಪನಿಯ ವ್ಯವಸ್ಥಾಪಕರಾಗಿದ್ದರಿಂದ ಕೆಲ ಗ್ರಾಹಕರು ಆರೋಪಿಗಳು ಸೂಚಿಸಿದ ಕಂಪನಿಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಹೊಸ ಕಂಪನಿ ಸ್ಥಾಪನೆ ಉದ್ದೇಶ: ಹೊಸ ಕಂಪನಿ ಸ್ಥಾಪನೆ ಮಾಡಿ, ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ವಂಚನೆ ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next