Advertisement

ಇವಿಎಂ ವಿಶ್ವಾಸಾರ್ಹತೆ ಸಾಕ್ಷೀಕರಿಸಿದ 2.64 ಕೋಟಿ ಮತದಾರರು

11:44 PM Apr 09, 2023 | Team Udayavani |

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಳಕೆ ಮಾಡಲಾಗುವ “ವಿದ್ಯುನ್ಮಾನ ಮತಯಂತ್ರ’ (ಇವಿಎಂ)ಗಳ ವಿಶ್ವಾಸಾರ್ಹತೆ ಮತ್ತು ತಾಂತ್ರಿಕ ನೈಜತೆ ಬಗ್ಗೆ ರಾಜ್ಯದ ಅರ್ಧದಷ್ಟು ಮತದಾರರು ತಮ್ಮ ವಿಶ್ವಾಸದ ಮುದ್ರೆ ಒತ್ತಿದ್ದಾರೆ.

Advertisement

ಹೌದು! ಇವಿಎಂಗಳ ಕುರಿತು ತಿಳಿವಳಿಕೆ ನೀಡುವ ಮತ್ತು ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹಮ್ಮಿಕೊಂಡಿದ್ದ ಅಭಿಯಾನದಲ್ಲಿ ರಾಜ್ಯದ ಒಟ್ಟು 5.24 ಕೋಟಿ ಮತದಾರರ ಪೈಕಿ 2.64 ಕೋಟಿ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ಇವಿಎಂಗಳ ವಿಶ್ವಾಸಾರ್ಹ ತೆಯನ್ನು ಸಾಕ್ಷೀಕರಿಸಿದ್ದಾರೆ.

ಇವಿಎಂ ವಿಶ್ವಾಸಾರ್ಹತೆ ಬಗ್ಗೆ ಸುಪ್ರೀಂಕೋರ್ಟ್‌ ಅಧಿಕೃತ ಮುದ್ರೆ ಒತ್ತಿದ ಮೇಲೂ, ಚುನಾವಣಾ ಆಯೋಗ ಹಲವು ಬಾರಿ ಅದನ್ನು ಸಾಬೀತುಪಡಿಸಿದ ನಂತರವೂ ಇವಿಎಂಗಳ ಬಗ್ಗೆ ಇನ್ನೂ ಗೊಂದಲಗಳು ನಿಂತಿಲ್ಲ. ಅದಕ್ಕಾಗಿ ಜನರಲ್ಲಿ ಇವಿಎಂಗಳ ಬಗ್ಗೆ ಅಗತ್ಯ ಮಾಹಿತಿ ನೀಡಿ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಈ ಅಭಿಯಾನ ಹಮ್ಮಿಕೊಂಡಿತ್ತು.

ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ರಾಜ್ಯಾದ್ಯಂತ ಜನವರಿಯಿಂದ ಮಾರ್ಚ್‌ ತಿಂಗಳವ ರೆಗೆ ಇವಿಎಂ-ವಿವಿಪ್ಯಾಟ್‌ ಜಾಗೃತಿ ಅಭಿಯಾನ ನಡೆಸಿತ್ತು. ಇದಕ್ಕಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ 2,945 ಸಂಚಾರ ತಂಡಗಳನ್ನು ನಿಯೋಜಿಸ ಲಾಗಿತ್ತು. ಮತ್ತು ಮೊಬೈಲ್‌ ವ್ಯಾನ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 37 ಸಾವಿರ ಮತದಾನ ಸ್ಥಳಗಳಲ್ಲಿ 32,999 ಗ್ರಾಮ ಹಾಗೂ ಜನವಸತಿಗಳಲ್ಲಿ ಇವಿಎಂ-ವಿವಿ ಪ್ಯಾಟ್‌ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನಗಳನ್ನು ನಡೆಸಲಾಯಿತು. ಇದರಲ್ಲಿ 2.64 ಕೋಟಿಗೂ ಅಧಿಕ ಮತದಾರರು ಪಾಲ್ಗೊಂಡು ಇವಿಎಂ-ವಿವಿಪ್ಯಾಟ್‌ಗಳ ಬಗ್ಗೆ ಮಾಹಿತಿ ಪಡೆದು, ತಮಗಿದ್ದ ಗೊಂದಲಗಳನ್ನು ನಿವಾರಿಸಿಕೊಂಡಿದ್ದಾರೆ. ಆ ಮೂಲಕ ಇವಿಎಂ ವಿಶ್ವಾÌಸಾರ್ಹತೆಯನ್ನು ಸಾಕ್ಷೀಕರಿಸಿದ್ದಾರೆ.

ಮೂರು ತಿಂಗಳ ಮುಂಚೆ ಅಭಿಯಾನ: ಚುನಾವಣೆ ನಡೆಯವ ವರ್ಷದಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳುವ 3 ತಿಂಗಳ ಮುಂಚಿತವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ರಾಜ್ಯವ್ಯಾಪಿ ಇವಿಎಂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು. ಜಿಲ್ಲಾ ಮಟ್ಟದಲ್ಲಿ ಹಾಗೂ ಕಂದಾಯ ಉಪವಿಭಾಗ ಮಟ್ಟದಲ್ಲಿ ಇವಿಎಂ ಪ್ರಾತ್ಯಕ್ಷಿಕೆ ಕೇಂದ್ರಗಳು, ಸಂಚಾರಿ ಪ್ರಾತ್ಯಕ್ಷಿಕೆ ವಾಹನಗಳು ಹಾಗೂ ಡಿಜಿಟಲ್‌ ವಿಧಾನಗಳನ್ನು ಅನುಸರಿಸಿ ಅಭಿಯಾನ ನಡೆಸಬೇಕು ಎಂದು ಚುನಾವಣಾ ಆಯೋಗದ ನಿರ್ದೇಶನ ಇದೆ. ಅದರಂತೆ ರಾಜ್ಯದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ತರಬೇತಿ ಮತ್ತು ಜಾಗೃತಿಗೆ ಎಂ-3 ಇವಿಎಂಗಳನ್ನು ಬಳಸಲಾಗುತ್ತದೆ. ಪಾಥಮಿಕ ಹಂತದ ಪರಿಶೀಲನೆ ಪೂರ್ಣಗೊಂಡ ಇವಿಎಂಗಳನ್ನು ಬಳಸಲಾಗುತ್ತದೆ. ಫೆ15ರಿಂದ ಮಾ.29ರವರೆಗೆ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಅಭಿಯಾನ ಪೂರ್ಣಗೊಳಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಭಿಯಾನದಲ್ಲಿ ಭಾಗಿಯಾಗಿದ್ದವರು: ಮತದಾರರು, ರಾಜಕೀಯ ಪಕ್ಷಗಳು, ಮಾಧ್ಯಮಗಳು, ವಿಕಲಚೇತನರು, ತೃತೀಯ ಲಿಂಗಿಗಳು, ರೈತರು, ಅಲೆಮಾರಿಗಳು, ನ್ಯಾಯಾಂಗ ಅಧಿಕಾರಿಗಳು, ಮೊದಲ ಬಾರಿಯ ಮತದಾರರು, ಕಾಲೇಜು ವಿದ್ಯಾರ್ಥಿಗಳು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂ-ವಿವಿಪ್ಯಾಟ್‌ ಜಾಗೃತಿ ಅಭಿಯಾನ ರಾಜ್ಯಾದ್ಯಂತ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಮತದಾರರು ಅತ್ಯಂತ ಉತ್ಸಾಹ ಮತ್ತು ಆಸಕ್ತಿಯಿಂದ ಪಾಲ್ಗೊಂಡಿದ್ದರು.
-ವಿ.ರಾಘವೇಂದ್ರ, ಜಂಟಿ ಮುಖ್ಯ ಚುನಾವಣಾಧಿಕಾರಿ (ಇವಿಎಂ)

-ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next