ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ಆದಾಯ ಉತ್ತಮಗೊಳಿಸಲು ರಾಜಸ್ವ ಸ್ವೀಕೃತಿಗಳಲ್ಲಿ ಯುಜಿಡಿ ಜೋಡನೆ, ಆಪ್ಟಿಕಲ್ ಫೈಬರ್ ಕೇಬಲ್ ಅಳವಡಿಕೆ ಸೇರಿದಂತೆ ವಿವಿಧ ಕಾರಣಗಳಿಗೆ ರಸ್ತೆ ಅಗೆತ ಶುಲ್ಕವಾಗಿ 2.50 ಕೋಟಿ ರೂ. ತೆರಿಗೆ ವಸೂಲಿಗೆ ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಾನಗರ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದ ಅವರು, ವ್ಯಾಪಾರ ಪರವಾನಿಗೆ 49 ಲಕ್ಷ ರೂ., ಆಸ್ತಿ ತೆರಿಗೆ ಮತ್ತು ದಂಡದಿಂದ ಬರಬಹುದಾದ ಆದಾಯ 19.16 ಕೋಟಿ ರೂ. ಬೇಡಿಕೆ ನಿಗದಿ ಮಾಡಲಾಗಿದೆ. ಕಟ್ಟಡ ಖಾಯ್ದೆಗಳಿಗೆ ಸಂಬಂಧಪಟ್ಟ ಶುಲ್ಕಗಳ ರೂಪದಲ್ಲಿ 4.15 ಕೋಟಿ ರೂ. ಹಾಗೂ ಘನತ್ಯಾಜ್ಯ ನಿರ್ವಹಣಾ ಶುಲ್ಕವಾಗಿ 4 ಕೋಟಿ ರೂ. ವಸೂಲಾತಿ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಇದರೊಂದಿಗೆ ಅನುದಾನದ ರೂಪದಲ್ಲಿ ವಿವಿಧ ಲೆಕ್ಕ ಶೀರ್ಷಿಕೆ ಅಡಿಯಲ್ಲಿ ಅನಿರ್ಬಂಧಿತ ಎಸ್‌ಎಫ್‌ಸಿ ಅಡಿ 4.50 ಕೋಟಿ ರೂ. ಎಸ್ ಎಫ್‌ಸಿ ವೇತನದ ಅಡಿಯಲ್ಲಿ 15.50 ಕೋಟಿ ರೂ. ಹಾಗೂ 15ನೇ ಹಣಕಾಸು ಯೋಜನೆಯಡಿ 16.50 ಕೋಟಿ ರೂ. ಎಂ.ಜಿ.ಎನ್.ವಿ.ವೈ ಹಾಗೂ ಇತರೆ ಯೋಜನೆಗಳಲ್ಲಿ 33.50 ಕೋಟಿ ರೂ. ಹೀಗೆ ಸುಮಾರು 70.00 ಕೋಟಿ ರೂ. ಬಂಡವಾಳ ಆದಾಯ ನಿರೀಕ್ಷಿಸಲಾಗಿದೆ 13.61 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
ನಗರದ ಸಮಗ್ರ ಅಭಿವೃದ್ಧಿ ಹಾಗೂ ನಿತ್ಯದ ಖರ್ಚು-ವೆಚ್ಚಗಳನ್ನು ಸರಿದೂಗಿಸಿಕೊಂಡು ಪ.ಜಾ, ಪ.ಪಂ ಇತರೆ ಹಿಂದುಳಿದ ವರ್ಗ ವಿಶೇಷ ಚೇತನರ ಹಾಗೂ ಕ್ರೀಡಾಪಟುಗಳ ಶ್ರೇಯೋಭಿವೃದ್ಧಿಗೆ ನಿಯಮದಂತೆ ಅನುದಾನ ಮೀಸಲಿಬೇಕು. ವಿಶೇಷವಾಗಿ ನಗರದ ಹಸಿರೀಕರಣಕ್ಕಾಗಿ 50 ಲಕ್ಷ ರೂ. ಕಾಯ್ದಿರಿಸಲಾಗಿದೆ ಎಂದರು.
ಅದರಂತೆ ಉದ್ಯಾನವನಗಳ ಅಭಿವೃದ್ಧಿ ಗಮನದಲ್ಲಿ ಇರಿಸಿಕೊಂಡು 136.01 ಕೋಟಿ ರೂ. ಖರ್ಚು ಅಳವಡಿಸಿಕೊಂಡು 9.43 ಲಕ್ಷಗಳ ಉಳಿತಾಯ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಆಯುಕ್ತ ವಿಜಯ ಮೆಕ್ಕಳಕಿ, ಲೆಕ್ಕ ಪರಿಶೋಧನಾಧಿಕಾರಿ ಎಸ್.ದೊಡ್ಡಮನಿ, ಲೆಕ್ಕಾ ಧೀಕ್ಷಕ ವಿಶ್ವನಾಥ ನಂದಿ, ಅಜೀತ ಭೂಸೇರಿ, ಎನ್. ಆರ್, ಕಗ್ಗೊàಡ, ಪ್ರಭಾವತಿ ಜಂಡೆ ಇದ್ದರು.