Advertisement

2.5 ಕೋಟಿ ರೂ. ವೆಚ್ಚದಲ್ಲಿ 25 ಅಂಗನವಾಡಿ ಕೇಂದ್ರ ನಿರ್ಮಾಣ

09:50 PM Jan 17, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2.5 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಅಂಗನವಾಡಿ ಕೇಂದ್ರಗಳು ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಹೊಸ ಅಂಗನವಾಡಿ ಕೇಂದ್ರದಲ್ಲಿ ಕಲಿಯುವ ಅವಕಾಶ ಲಭ್ಯವಾಗಲಿದೆ. ಅಗತ್ಯ ಮತ್ತು ಗುಣ ಮಟ್ಟದ ಮೂಲ ಸೌಲಭ್ಯಗಳೊಂದಿಗೆ ಕೇಂದ್ರ ಗಳು ನಿರ್ಮಾಣವಾಗುತ್ತಿವೆ.

Advertisement

ಗ್ರಾಮಾಂತರ ಭಾಗದ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಕಲ್ಪಿಸಲು ಸನಿಹದಲ್ಲೇ ಅಂಗನವಾಡಿ ಕೇಂದ್ರಗಳಿರಬೇಕು ಎಂಬ ಉದ್ದೇಶದಿಂದ ಎಂಆರ್‌ಪಿಎಲ್‌ನ ಸಿಎಸ್‌ಆರ್‌ ಅನುದಾನ ಮತ್ತು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಹೊಂದಾಣಿಕೆ ಅನುದಾನದೊಂದಿಗೆ ಅಂಗನವಾಡಿ ಕೇಂದ್ರಗಳು ನಿರ್ಮಾಣವಾಗುತ್ತಿವೆ. ಈ 25 ಅಂಗನ ವಾಡಿ ಕೇಂದ್ರಗಳಲ್ಲಿ ಕೆಲವು ಹೊಸ ಅಂಗನವಾಡಿಗಳಾದರೆ, ಮತ್ತೆ ಕೆಲವು ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸುತ್ತಿರುವುದಾಗಿದೆ. ಶೌಚಾಲಯ, ಅಡುಗೆ ಕೋಣೆ, ಪ್ರೀ-ಸ್ಕೂಲ್‌, ಆಹಾರ ಸಂಗ್ರಹ ಕೇಂದ್ರ, ಆಟಿಕೆಗಳು ಸಹಿತ ಎಲ್ಲ ಅಗತ್ಯ ಮೂಲ ಸೌಕರ್ಯಗಳನ್ನು ಈ ಅಂಗನವಾಡಿ ಕೇಂದ್ರಗಳಿಗೆ ಕಲ್ಪಿಸಿಕೊಡಲಾಗುವುದು. ಇವುಗಳು ಮಾದರಿ ಕೇಂದ್ರಗಳಾಗಿ ರೂಪು ತಳೆಯ ಲಿವೆ ಎಂದು ಜಿ.ಪಂ. ಸಿಇಒ ತಿಳಿಸಿದ್ದಾರೆ.

ಎಲ್ಲೆಲ್ಲಿ ಕೇಂದ್ರಗಳು ನಿರ್ಮಾಣ
ಬೆಳ್ತಂಗಡಿ ತಾಲೂಕಿನ ಬಲ್ಲಂಗೇರಿ ಕೊರ್ಲೊಟ್ಟು, ಅಕ್ಷರ ಕರಾವಳಿ, ಆರಂಬೋಡಿ-2, ಸುಳ್ಯದ ಮೇದಿನಡ್ಕ, ಮಂಗಳೂರು ಗ್ರಾಮಾಂತರದ ಕುದ್ರಿ ಪದವು, ಸಣ್ಣ ಮದಕ, ನಾಟೆಕಲ್‌, ಉಳೈ ಪಾಡಿ-2, ಮಲ್ಲಿಗೆಯಂಗಡಿ, ಕೊರಕಂಬ್ಲಿ, ಪಾಲಡ್ಕ ಚರ್ಚ್‌, ನೆಲ್ಲಿಕಾರ್‌-1, ಕೊಲ್ಯ-1, ಅಡ್ಕರೆ, ಸಂತಲಿಗೋರಿ, ಕಂಬ್ಲಿಬೆಟ್ಟು, ಬಂಟ್ವಾಳ ತಾಲೂಕಿನ ಪರ್ಲಿಯ, ಕಲಾಯಿಬನ, ಹಳೀರ, ಕಬಕ, ಬೆದ್ರಕಾಡು, ಪಲ್ಲದಕೋಡಿ, ಪುತ್ತೂರು ತಾಲೂಕಿನ ಉಪ್ಪಿನಂಗಡಿ ಮಠ, ಪಂಜಿಗುಡ್ಡೆ, ಕಳಾರ ಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ.

ತಲಾ 10 ಲಕ್ಷ ರೂ.
ಎಂಆರ್‌ಪಿಎಲ್‌ನ ಸಿಎಸ್‌ಆರ್‌ ಅನುದಾನವಾಗಿ ತಲಾ 5 ಲಕ್ಷ ರೂ. ಹಾಗೂ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ತಲಾ 5 ಲಕ್ಷ ರೂ.ಗಳಂತೆ ಒಟ್ಟು 10 ಲಕ್ಷ ರೂ.ಗಳಲ್ಲಿ ಪ್ರತಿ ಅಂಗನವಾಡಿ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. 25 ಅಂಗನವಾಡಿ ಕೇಂದ್ರಗಳ ಒಟ್ಟು ಖರ್ಚು 2.5 ಕೋಟಿ ರೂ.ಗಳಾಗಲಿವೆ ಎಂದು ಜಿ.ಪಂ. ಅಧಿಕಾರಿಗಳು ತಿಳಿಸಿದ್ದಾರೆ.

243 ಅಂಗನವಾಡಿ ಕೇಂದ್ರಗಳ ದುರಸ್ತಿ
ಇದೇ ವೇಳೆ ಹಳೆಯದಾದ ಮತ್ತು ಶಿಥಿಲವಾಸ್ಥೆಯಲ್ಲಿರುವ 243 ಅಂಗನವಾಡಿ ಕೇಂದ್ರಗಳನ್ನು 1.25 ಕೋಟಿ ರೂ. ವೆಚ್ಚದಲ್ಲಿ ರಿಪೇರಿ ಮಾಡಲು ಜಿಲ್ಲಾ ಪಂಚಾಯತ್‌ ನಿರ್ಧರಿಸಿದೆ. ಈ ಪೈಕಿ 32 ಕಟ್ಟಡಗಳ ದುರಸ್ತಿ ಕಾರ್ಯ ಮುಗಿದಿದ್ದರೆ, 57 ಕಟ್ಟಡಗಳ ದುರಸ್ತಿ ಕಾಮಗಾರಿ ಪ್ರಗತಿ ಯಲ್ಲಿದೆ. 154 ಕಟ್ಟಡಗಳ ಕಾಮಗಾರಿ ಇನ್ನಷ್ಟೇ ಶುರುವಾಗಬೇಕಿದೆ.

Advertisement

252 ಕೇಂದ್ರಗಳಿಗಿಲ್ಲ ಸ್ವಂತ ಕಟ್ಟಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು 2,106 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 1,854 ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದಿದ್ದರೆ, 33 ಕೇಂದ್ರಗಳು ಪಂಚಾಯತ್‌ ಕಟ್ಟಡದಲ್ಲಿ, 72 ಕೇಂದ್ರಗಳು ಸಮುದಾಯ ಕೇಂದ್ರಗಳಲ್ಲಿ, 25 ಯುವಕ ಮಂಡಲ ಕಟ್ಟಡಗಳಲ್ಲಿ, 2 ಮಹಿಳಾ ಮಂಡಲ ಕಟ್ಟಡಗಳಲ್ಲಿ, 69 ಶಾಲಾ ಕಟ್ಟಡಗಳಲ್ಲಿ ಹಾಗೂ 3 ಪರ್ಯಾಯ ವ್ಯವಸ್ಥೆಯಡಿ ಕಾರ್ಯೋನ್ಮುಖವಾಗಿವೆ. 48 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯಾಚರಿಸುತ್ತಿವೆ.

ನಿವೇಶನಕ್ಕೆ ಮನವಿ
ಜಿಲ್ಲೆಯಲ್ಲಿ ಸ್ವಂತ ಕಟ್ಟಡ ಹೊಂದಿಲ್ಲದ ಅಂಗನವಾಡಿಗಳು ಕೆಲವು ಇವೆ. ಬಾಡಿಗೆ ಕಟ್ಟಡ ಅಥವಾ ಇತರ ಪರ್ಯಾಯ ವ್ಯವಸ್ಥೆಗಳಲ್ಲಿ ಅಂತಹ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ. ಸ್ವಂತ ಕಟ್ಟಡ ಹೊಂದಿಲ್ಲದ ಅಂಗನವಾಡಿಗಳಿಗೆ ನಿವೇಶನ ಒದಗಿಸಲು ಇಲಾಖೆ ಸಚಿವರಲ್ಲಿ ಮನವಿ ಮಾಡಲಾಗಿದೆ. ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಲಾಗುವುದು ಎಂಬುದಾಗಿ ಸಚಿವರು ಭರವಸೆ ನೀಡಿದ್ದಾರೆ.
 - ಉಸ್ಮಾನ್‌, ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು

ಮಾದರಿ ರೂಪದ ಅಂಗನವಾಡಿ
ದ.ಕ. ಜಿಲ್ಲೆಯಲ್ಲಿ 25ಕ್ಕೂ ಹೆಚ್ಚುವರಿ ಅಂಗನವಾಡಿಗಳನ್ನು ಮಾದರಿ ರೂಪದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಆವಶ್ಯಕತೆ ಇರುವಲ್ಲಿ, ಹಾಲಿ ನಾದುರಸ್ತಿಯ ಅಂಗನವಾಡಿ ಪ್ರದೇಶಗಳಲ್ಲಿ ಹೊಸ ಅಂಗನವಾಡಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು, ಕಾಮಗಾರಿ ಆರಂಭವಾಗಿದೆ. ಆಯಾ ಗ್ರಾ. ಪಂ., ಎಂಆರ್‌ಪಿಎಲ್‌ ನೆರವಿನಿಂದ ಈ ಯೋಜನೆ ಸಾಕಾರಗೊಳ್ಳಲಿದೆ.
– ಡಾ| ಸೆಲ್ವಮಣಿ ಆರ್‌.ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿ.ಪಂ.

ಪ್ರತಿ ತಾಲೂಕುಗಳಲ್ಲಿ ಎಷ್ಟು ?
ತಾಲೂಕು     ಅಂಗನವಾಡಿ ಸಂಖ್ಯೆ
ಬೆಳ್ತಂಗಡಿ              3
ಸುಳ್ಯ                   1
ಮಂಗಳೂರು         12
ಬಂಟ್ವಾಳ              6
ಪುತ್ತೂರು              3

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next