ಮಂಗಳೂರು: ಸೈನಿಕನೆಂದು ನಂಬಿಸಿ ಹಿರಿಯ ನಾಗರಿಕ ರೋರ್ವರ ಖಾತೆಯಿಂದ ಹಣ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಹಿರಿಯ ನಾಗರಿಕರೋರ್ವರು ತಮ್ಮ ಅಪಾರ್ಟ್‌ಮೆಂಟ್ ಅನ್ನು ಬಾಡಿಗೆಗೆ ನೀಡುವ ಬಗ್ಗೆ “ಮ್ಯಾಜಿಕ್ ಬ್ರಿಕ್’ನಲ್ಲಿ ಜಾಹೀರಾತು ಹಾಕಿದ್ದರು. ಅದನ್ನು ನೋಡಿ ಡಿ. 8ರಂದು ಅಪರಿಚಿತನೋರ್ವ ತನ್ನ ಹೆಸರು ಆಶೀಶ್ ಕುಮಾರ್ ಎಂದು ಹಾಗೂ ತಾನು ಸೈನಿಕನೆಂದು ಪರಿಚಯಿಸಿಕೊಂಡು ಬಾಡಿಗೆ ಬಗ್ಗೆ ವಿಚಾರಿಸಿದ.
ಮುಂಗಡ ಹಣ ಪಾವತಿಸುತ್ತೇನೆ. ಅನಂತರ ಆರ್ಮಿಯ ಕಮಾಂಡಿಂಗ್ ಪೇಮೆಂಟ್‌ನಿಂದಲೇ ಹಣ ಸಂದಾಯವಾಗಲಿದೆ ಎಂದು ಹೇಳಿದ. 1 ರೂ., 5 ರೂ. ಮತ್ತು 49,999 ರೂ.ಗಳ ಯುಪಿಐ ಕೋಡ್ ಅನ್ನು ಹಿರಿಯ ನಾಗರಿಕರಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ. ಇದನ್ನು ಸತ್ಯವೆಂದು ನಂಬಿದ ಹಿರಿಯ ನಾಗರಿಕರು ಆತ ಹೇಳಿದಂತೆ ಮಾಡಿದ್ದರು. ಆದರೆ ಅವರ ಖಾತೆಗೆ ಹಣ ಜಮೆಯಾಗುವ ಬದಲು ಅವರ ಖಾತೆಯಿಂದಲೇ ಡಿ. 8ರಂದು 1,41,999 ರೂ.ಅಪರಿಚಿತರ ಖಾತೆಗೆ ವರ್ಗಾವಣೆಗೊಂಡಿತ್ತು.
ಡಿ. 9ರಂದು ಮತ್ತೆ ಕರೆ ಮಾಡಿದ ಆರೋಪಿಯು, ಮತ್ತೂಮ್ಮೆ ಈ ಹಿಂದಿನಂತೆಯೇ ಯುಪಿಐ ಕೋಡ್ ಬಳಸುವಂತೆ ತಿಳಿಸಿದ. ಅನಂತರ ಆರ್ಮಿ ಇಲಾಖೆಯಿಂದ ಹಣ ಪಾವತಿಯಾಗಲಿದೆ ಎಂದೂ ನಂಬಿಸಿದ. ಹಿರಿಯ ನಾಗರಿಕರು ಅದೇ ರೀತಿ ಮಾಡಿದ್ದು, ಮತ್ತೆ ಅವರ ಖಾತೆಯಿಂದ ಮತ್ತೆ 1 ಲ.ರೂ. ವಗಾರ್ವಣೆಯಾಗಿತ್ತು. ಹೀಗೆ ಆರೋಪಿಯು ಆನ್‌ಲೈನ್ ಮೂಲಕ 2,41,999 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿದ್ದ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.