ವಿಜಯಪುರ: 6ನೇ ವೇತನ ಸೌಲಭ್ಯಕ್ಕೆ ಆಗ್ರಹಿಸಿ ಸಾರಿಗೆ ಸಂಸ್ಥೆ ನೌಕರರು ನಡೆಸುತ್ತಿರುವ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಈ ಅವಧಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗಕ್ಕೆ 2.37 ಕೋಟಿ ರೂ. ನಷ್ಟವಾಗಿದೆ.
ನಾಲ್ಕನೇ ದಿನವಾದ ಶನಿವಾರ 91 ಅನುಸೂಚಿಯಲ್ಲಿ ಕಾರ್ಯಾಚರಣೆ ನಡೆದಿದ್ದು, 20 ಲಕ್ಷ ರೂ. ಆದಾಯ ಬಂದಿದೆ. ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದಾಗಿ ಖಾಸಗಿ ವಾಹನಗಳ ದರ್ಬಾರ್ ಮುಂದುವರಿದಿದೆ.
ನೇರ ಪರಿಣಾಮ ಪ್ರಯಾಣಿಕರ ಮೇಲಾಗಿದ್ದು ನಿಗದಿತ ದರಕ್ಕಿಂತ ಹೆಚ್ಚು ಹಣ ನೀಡಿ ಪ್ರಯಾಣಿಸುವ ಪರಿಸ್ಥಿತಿ ಎದುರಿಸಿದ್ದು ಕಂಡು ಬಂತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗದಿಂದ ನಿತ್ಯವೂ 670 ಅನುಸೂಚಿಗಳ ಕಾರ್ಯಾಚರಿಸುತ್ತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ನಾಲ್ಕನೇ ದಿನ 579 ಅನುಸೂಚಿ ರದ್ದಾಗಿವೆ.
ಕಾರ್ಯಾಚರಣೇ ಮಾಡಿರುವ 91 ಅನುಸೂಚಿಗಳಿಂದ ಸಂಜೆವರೆಗೆ 20 ಲಕ್ಷ ರೂ. ಆದಾಯ ಬಂದಿದ್ದು, 57 ಲಕ್ಷ ರೂ. ಆದಾಯ ಖೋತಾ ಆಗಿದೆ. ಈ ಮಧ್ಯೆ ಕಳೆದ ನಾಲ್ಕು ದಿನಗಳಲ್ಲಿ ಮುಷ್ಕರ ಆರಂಭವಾದ ಮೊದಲ ದಿನವಾದ ಏ. 7ರಂದು 215 ಅನುಸೂಚಿಗಳು ರದ್ದಾಗಿದ್ದು, ಕಾರ್ಯಾಚರಣೆ ನಡೆಸಿದ 455 ಅನುಸೂಚಿಗಳಿಂದ 31 ಲಕ್ಷ ರೂ. ಆದಾಯ ಬಂದಿದ್ದು, 38.70 ಲಕ್ಷ ರೂ. ಆದಾಯಕ್ಕೆ ಖೋತಾ ಆಗಿದೆ. ಏ. 8ರಂದು 599 ಅನುಸೂಚಿಗಳು ರದ್ದಾಗಿದ್ದು, 67.37 ಲಕ್ಷ ರೂ. ಆದಾಯ ಖೋತಾ ಆಗಿದೆ. ಕಾರ್ಯಾಚರಣೆ ನಡೆಸಿದ 71 ಅನುಸೂಚಿಗಳಿಂದ 14.19 ಲಕ್ಷ ರೂ. ಆದಾಯ ಬಂದಿದ್ದು, ಈ ಆದಾಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯ ಎಲ್ಲ ವಿಭಾಗಗಳಲ್ಲೇ ಗರಿಷ್ಠ ಎಂದು ದಾಖಲಾಗಿತ್ತು.
ಏ. 9ರಂದು 645 ಅನುಸೂಚಿಗಳು ರದ್ದಾಗಿದ್ದು, 25 ಅನುಸೂಚಿಗಳು ಮಾತ್ರ ಕಾಯಾಚರಣೆ ನಡೆಸಿದೆ. ಇದರಿಂದ 2.54 ಲಕ್ಷ ರೂ. ಆದಾಯ ಬಂದಿದ್ದು, 74.12 ಲಕ್ಷ ರೂ. ಆದಾಯ ಖೋತಾ ಆಗಿದೆ. ಏ. 10ರಂದು ಸಂಜೆವರೆಗೆ 579 ಅನುಸೂಚಿಗಳು ರದ್ದಾಗಿದ್ದು, 91 ಅನುಸೂಚಿಗಳು ಕಾರ್ಯಾಚರಣೆ ನಡೆಸಿವೆ. ಇದರಿಂದ 20 ಲಕ್ಷ ರೂ. ಆದಾಯ ಬಂದಿದ್ದು, 57 ಲಕ್ಷ ರೂ. ಆದಾಯ ಖೋತಾ ಆಗಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣ ಕುರುಬರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಪರಿಣಾಮ ಖಾಸಗಿ ವಾಹನಗಳ ದರ್ಬಾರ್ ಮುಂದುವರಿದಿದ್ದು, ಸರ್ಕಾರಿ ಸ್ವಾಮ್ಯದ ಬಸ್ ನಿಲ್ದಾಣಗಳಿಗೆ ಪ್ರವೇಶಿಸುವ ಮೂಲಕ ಖಾಸಗಿ ಬಸ್‌ಗಳು ಜಿಲ್ಲೆಯಲ್ಲಿ ಸಂಚಾರ ಆರಂಭಿಸಿವೆ. ಖಾಸಗಿ ಬಸ್ ಹೊರತಾಗಿ ಇತರೆ ಸಾರಿಗೆಯ ಖಾಸಗಿ ವಾಹನಗಳ ಓಡಾಟ ಹೆಚ್ಚು ವೇಗ ಪಡೆದಿದ್ದು, ನಿಗದಿಗಿಂತ ಹೆಚ್ಚಿನ ದರ ಪಡೆಯುತ್ತಿರುವ ಕುರಿತು ದೂರುಗಳು ಮುಂದುವರಿದಿವೆ. ಕ್ರಮ ಕೈಗೊಂಡಿದ್ದೇವೆ, ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ನೀಡುತ್ತಿರುವ ಮಾತುಗಳು ಕಾರ್ಯಾಚರಣೆಗೆ ಬಂದಿಲ್ಲ ಎಂಬುದು ಪ್ರಯಾಣಿಕರ ಗೋಳಾಟದ ದೃಶ್ಯಗಳು ಸಾಕ್ಷೀಕರಿಸುತ್ತಿವೆ.
ಸರ್ಕಾರಿ ಸಾರಿಗೆ ಸಂಸ್ಥೆಯ ಓಡಿದ ಬಸ್ ಗಳು ಯಾದಗಿರಿ, ರಾಯಚೂರು, ಕಲಬುರಗಿ, ಹೊಸಪೇಟೆ, ಬೆಂಗಳೂರು, ಮಂಗಳೂರು, ನೆರೆಯ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ, ಸಾತಾರಾ, ಸಾಂಗ್ಲಿ, ಮಿರಜ್ ಹೀಗೆ ನಗರ ಪ್ರದೇಶಗಳಿಗೆ ಮಾತ್ರ ಕಾರ್ಯಾಚರಿಸುತ್ತಿವೆ. ಪರಿಣಾಮ ಗ್ರಾಮೀಣ ಸಾರಿಗೆಗೆ ಖಾಸಗಿ ವಾಹನ ಅವಲಂಬಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿರುವವರ ವಿರುದ್ಧ ಕ್ರಮಗಳಾಗಿಲ್ಲ. ಹೆಚ್ಚಿನ ಆರ್ಥಿಕ ಹೊರೆ ಅನುಭವಿಸುತ್ತಿರುವ ಪ್ರಯಾಣಿಕರ ಗೋಳೂ ಕೊನೆಯಾಗಿಲ್ಲ.