Advertisement

2+2 ಮಾತುಕತೆ ; ಬಿಕ್ಕಟ್ಟಿನ ನಡುವೆ ಬಲವರ್ಧನೆ

01:06 AM Oct 27, 2020 | mahesh |

ಗಡಿ ಭಾಗದಲ್ಲಿ ಚೀನ ಮತ್ತು ಭಾರತದ ನಡುವೆ ಬಿಕ್ಕಟ್ಟು ಮುಂದುವರಿದಿರುವ ವೇಳೆಯಲ್ಲೇ ಭಾರತ-ಅಮೆರಿಕ ನಡುವಿನ 2+2 ಮಾತುಕತೆಗೆ ಹೊಸದಿಲ್ಲಿಯಲ್ಲಿ ವೇದಿಕೆ ಸಿದ್ಧವಾಗಿದ್ದು, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕಲ್‌ ಪಾಂಪ್ಯು ಹಾಗೂ ರಕ್ಷಣ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಆಗಮಿಸಿದ್ದಾರೆ. ಭಾರತವನ್ನು ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಜೈಶಂಕರ್‌ ಪ್ರತಿನಿಧಿಸಲಿದ್ದಾರೆ.

Advertisement

ಬೆಳೆಯುತ್ತಿರುವ ಚೀನ ಉಪಟಳವನ್ನು ಹತ್ತಿಕ್ಕುವ ದೃಷ್ಟಿಯಿಂದ ಇತ್ತೀಚೆಗಷ್ಟೇ ಜಪಾನ್‌ನಲ್ಲಿ ನಡೆದ ಕ್ವಾಡ್‌ ಸಭೆಯಲ್ಲಿ ಭಾರತ, ಅಮೆರಿಕ, ಜಪಾನ್‌ ಹಾಗೂ ಆಸ್ಟ್ರೇಲಿಯಾ ಮಹತ್ವದ ಒಪ್ಪಂದ ಮಾಡಿಕೊಂಡಿದ್ದವು. ಇದಾದ ಕೆಲವೇ ದಿನಗಳಲ್ಲೇ 2+2 ಸಭೆ ನಡೆಯುತ್ತಿದ್ದು, ಚೀನದ ಈ ಬೆಳವಣಿಗೆಯನ್ನು ಎಚ್ಚರಿಕೆಯಿಂದ ಗಮನಿಸಲಿದೆ ಎನ್ನುವುದರಲ್ಲಿ ಸಂಶಯವಿಲ್ಲ.

ಕಳೆದ ಮೂರು ವರ್ಷಗಳಲ್ಲಿ ಭಾರತ-ಅಮೆರಿಕದ ಸಚಿವರ ನಡುವೆ ಇದು ಮೂರನೇ 2+2 ಸಭೆಯಾಗಿದ್ದು, 2018 ರಲ್ಲಿ ದಿಲ್ಲಿಯಲ್ಲಿ ಮೊದಲ ಹಾಗೂ 2019ರಲ್ಲಿ ಅಮೆರಿಕದಲ್ಲಿ ಎರಡನೇ ಮಾತುಕತೆ ನಡೆದಿತ್ತು. ಈಗ 2+2 ಮಾತುಕತೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಭದ್ರತಾ ಸಹಕಾರ ಬಲವರ್ಧನೆಯ ನಿಟ್ಟಿನಲ್ಲಿ ಮಹತ್ತರ ಚರ್ಚೆ ನಡೆಯಲಿವೆ.

ನವೆಂಬರ್‌ 3 ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಅಲ್ಲಿನ ಭಾರತೀಯ ಮೂಲದ ಮತದಾರರನ್ನು ಸೆಳೆಯುವ ದೃಷ್ಟಿಯಲ್ಲಿಯೂ ಅಮೆರಿಕಕ್ಕೆ ಈ ಮಾತುಕತೆ ಮಹತ್ತರದ್ದಾಗಿದೆ. ಈ ಕಾರಣದಿಂದಲೇ ಅಮೆರಿಕ ದೊಂದಿಗೆ ಗಮನಾರ್ಹ ಒಪ್ಪಂದಗಳನ್ನು ಭಾರತ ನಿರೀಕ್ಷಿಸುತ್ತಿದೆ. ರಕ್ಷಣ ಪರಿಣತರ ಪ್ರಕಾರ ಚೀನದ ವಿಸ್ತರಣಾವಾದಿ ಆಕಾಂಕ್ಷೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾರ್ಯ ತಂತ್ರ ರಚನೆ ಹಾಗೂ ಕೋವಿಡ್‌-19ಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆಗಳಾಗಬಹುದು.

ಇನ್ನು, ಅಮೆರಿಕ ಹಾಗೂ ಭಾರತ ಜಗತ್ತಿನ ಅತಿದೊಡ್ಡ ಕೋವಿಡ್‌-19 ಹಾಟ್‌ಸ್ಪಾಟ್‌ಗಳಾಗಿ ಬದಲಾಗಿರುವುದರಿಂದಾಗಿ, ಈ ಸಾಂಕ್ರಾಮಿಕದ ವಿರುದ್ಧ ಹೋರಾಡುವ ಸವಾಲೂ ಇವುಗಳೆದುರು ಇದೆ. ಈ ಕಾರಣಕ್ಕಾಗಿಯೇ ಕೋವಿಡ್‌ ವಿರುದ್ಧದ ಲಸಿಕೆಯ ಅಭಿವೃದ್ಧಿಯಲ್ಲಿ ಭಾರತ ಹಾಗೂ ಅಮೆರಿಕದ ಸಂಶೋಧನಾ ಉದ್ಯಮಗಳ ನಡುವೆ ಈಗಾಗಲೇ ಮಹತ್ತರ ಒಪ್ಪಂದಗಳಾಗಿವೆ. ವಿಶ್ವದ ಅತಿದೊಡ್ಡ ಲಸಿಕೆ ಉತ್ಪಾದನಾ ಕಂಪೆನಿಗಳಲ್ಲಿ ಒಂದಾಗಿರುವ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಆಫ್ ಇಂಡಿಯಾದ ಜತೆಗೆ ಅಮೆರಿಕದ 6 ಕಂಪೆನಿಗಳು ಸಂಶೋಧನೆ-ಅಭಿವೃದ್ಧಿ-ವಿನಿಮಯ ಒಪ್ಪಂದಗಳನ್ನು ಮಾಡಿಕೊಂಡಿವೆ. ಲಸಿಕೆ ಅಭಿವೃದ್ಧಿಯಷ್ಟೇ ಮುಖ್ಯವಾದದ್ದು, ಲಸಿಕೆಯ ಡೋಸ್‌ಗಳನ್ನು ಅಪಾರ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯ.

Advertisement

ಈ ಸಾಮರ್ಥ್ಯ ಭಾರತಕ್ಕೆ ಇದೆ. ಸತ್ಯವೇನೆಂದರೆ, ಇಂದು ಜಗತ್ತಿನ 70 ಪ್ರತಿಶತ ವಿವಿಧ ಲಸಿಕೆಗಳ ಉತ್ಪಾದನೆ ಯನ್ನು ಭಾರತವೇ ಮಾಡುತ್ತಿದೆ. ಅತೀ ಕಡಿಮೆ ಅವಧಿಯಲ್ಲೇ ಅತಿಹೆಚ್ಚು ಪ್ರಮಾಣದಲ್ಲಿ ಡೋಸ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವುದು ಚೀನ ಹಾಗೂ ಭಾರತಕ್ಕೆ. ಕೋವಿಡ್‌ ವಿಚಾರದಲ್ಲಿ ಚೀನವನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾ ಬಂದಿರುವ ಅಮೆರಿಕ ಈ ವಿಚಾರದಲ್ಲಿ ಭಾರತದತ್ತ ಮುಖ ಮಾಡಬಹುದು ಎನ್ನುವ ಪರಿಣತರ ನಿರೀಕ್ಷೆ ಸಹಜವೇ ಆಗಿದೆ. ಒಟ್ಟಲ್ಲಿ ಕೋವಿಡ್‌-19 ಹಾಗೂ ಗಡಿ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿರುವ ಭಾರತಕ್ಕೆ 2+2 ಮಾತುಕತೆಯ ಯಶಸ್ಸು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಿರೀಕ್ಷಿತ ಫ‌ಲಿತಾಂಶ ದೊರೆಯುವಂತಾಗಲಿ.

Advertisement

Udayavani is now on Telegram. Click here to join our channel and stay updated with the latest news.

Next