ಯಾದಗಿರಿ: ಕರ್ನಾಟಕ ಏಕೀಕರಣಕ್ಕೂ ಮುನ್ನ ನಿರ್ಮಾಣವಾಗಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಛಾವಣಿ ಸಂಪೂರ್ಣ ಶಿಥಿಲಗೊಂಡಿದ್ದು, ಆತಂಕದಲ್ಲಿಯೇ ಮಕ್ಕಳು ಪಾಠ ಆಲಿಸುವಂತಾಗಿದೆ.
ಗುರುಮಠಕಲ್ ನಗರದಲ್ಲಿ 1970ರಲ್ಲಿ ಮೈಸೂರು ರಾಜ್ಯವಿದ್ದ ಸಂದರ್ಭದಲ್ಲಿ ದಿ. ವೀರೇಂದ್ರ ಪಾಟೀಲ ಅವರಿಂದ ಉದ್ಘಾಟನೆಗೊಂಡಿರುವ ಪ್ರೌಢಶಾಲೆಯ ಕಟ್ಟಡ 18 ಕೊಠಡಿಗಳನ್ನು ಹೊಂದಿದೆ. ಮಳೆಯ ನೀರು ಗೋಡೆಗೆ ಇಳಿದು ಅಲ್ಲಲ್ಲಿ ಗೋಡೆಗಳು ಹಾಳಾಗುತ್ತಿದ್ದು, ಛಾವಣಿ ಈಗ ಶಿಥಿಲಾವಸ್ಥೆಗೆ ತಲುಪಿದ್ದು, ಶಿಕ್ಷಣ ಇಲಾಖೆ ಇತ್ತ ಗಮನ ಹರಿಸಬೇಕಿದೆ.
ಪ್ರಾಚೀನ ಶಾಲೆಯಲ್ಲಿ ಕನ್ನಡ, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಮಾಧ್ಯಮ ಬೋಧಿಸಲಾಗುತ್ತಿದ್ದು, ಸುಮಾರು 450ಕ್ಕೂ ಹೆಚ್ಚು ಮಕ್ಕಳು ಇಲ್ಲಿ ನಿತ್ಯ ಜ್ಞಾನಾರ್ಜನೆಗೆ ಆಗಮಿಸುತ್ತಾರೆ. ಶಾಲೆಯ ಎಲ್ಲಾ ಕೊಠಡಿಗಳ ಛಾವಣಿಗೆ ಬಳಸಲಾದ ಸಲಾಕೆಗಳು ಕಾಣುತ್ತಿದ್ದು, ವಿಜ್ಞಾನ ಲ್ಯಾಬ್ ಛಾವಣಿಯ ಸಿಮೆಂಟ್ ಅರ್ಧದಷ್ಟು ಕುಸಿದು ಬಿದ್ದಿದೆ. ನಿತ್ಯ ಇಲ್ಲಿಗೆ ಆಗಮಿಸುವ ಮಕ್ಕಳು ಭಯದಲ್ಲಿಯೇ ಕಾಲ ಕಳೆಯುವಂತಾಗಿದೆ ಎನ್ನುತ್ತಾರೆ ಪಾಲಕರು.
ಬೆಳಗ್ಗೆ ಮನೆಯಿಂದ ಶಾಲೆಗೆ ಬರುವ ಮಕ್ಕಳು ಮರಳಿ ಮನೆ ತಲುಪುವ ಭರವಸೆಯಿಲ್ಲದ ಭಯ ಇಲ್ಲಿನ ಮಕ್ಕಳು ಹಾಗೂ ಶಿಕ್ಷಕರಲ್ಲಿ ಆವರಿಸಿದೆ. ಮಳೆಯಿಂದ ಹೊರ ಭಾಗದ ಗೋಡೆಗಳು ಪಾಚಿಗಟ್ಟಿದ್ದು, ಛಾವಣಿಯಿಂದ ಮಳೆ ನೀರು ಒಳಗೆ ಬರುತ್ತಿರುವುದರಿಂದ ಶಿಕ್ಷಕರ ಸಿಬ್ಬಂದಿ ಕೋಣೆಯಲ್ಲಿಯೂ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅನಿವಾರ್ಯವಾಗಿ ದಿನ ಕಳೆಯುವಂತಾಗಿದೆ. ಸರ್ಕಾರಿ ಶಾಲೆಗೆ ಬಡವರ ಮಕ್ಕಳೇ ಹೆಚ್ಚಾಗಿ ಬರುತ್ತಾರೆ. ಅದಲ್ಲದೇ ಪ್ರೌಢಶಾಲೆಯೆಂದ ಮೇಲೆ ವಯಸ್ಸಿಗೆ ಬಂದ ಮಕ್ಕಳು ಇರುವುದರಿಂದ ದುರದೃಷ್ಟವಶಾತ್ ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಇಲ್ಲಿನ ಶಿಕ್ಷಕರಲ್ಲಿಯೂ ಕೂಡ ಭಯ ಆವರಿಸಿದೆ. ಈ ಹಿಂದೆ ಶಾಲೆಯ ಛಾವಣಿ ರಿಪೇರಿಗೆಂದು 12 ಲಕ್ಷ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ ಎಂದು ತಿಳಿದು ಬಂದಿದ್ದು, ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ಶಾಲೆಯ ಎಲ್ಲಾ ಕಟ್ಟಡಗಳ ಛಾವಣಿಯನ್ನು ತೆಗೆದು ಹೊಸದಾಗಿ ಹಾಕಬೇಕು. ಅಂದಾಗ ಮಾತ್ರ ಇಲ್ಲಿ ಭಯಮುಕ್ತ ಪಾಠ ಆಲಿಸಬಹುದು ಎನ್ನುತ್ತಾರೆ ಇಲ್ಲಿನ ಮಕ್ಕಳು.