Advertisement

11 ಲಕ್ಷ ಜನರ ಆರೋಗ್ಯ ತಪಾಸಣೆ ಪೂರ್ಣ

05:51 PM Apr 25, 2020 | Naveen |

ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ 11ಲಕ್ಷ ಜನರ ಆರೋಗ್ಯ ತಪಾಸಣಾ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದ್ದು, ಶುಕ್ರವಾರದಿಂದ ಬಿಎಲ್‌ಒ (ಮತಗಟ್ಟೆ ಅಧಿಕಾರಿ) ತಮ್ಮ ವ್ಯಾಪ್ತಿಯಲ್ಲಿ ಬಾಕಿಯುಳಿದಿರುವ ಮನೆಗಳ ಆರೋಗ್ಯ ಸಮೀಕ್ಷೆ ಕಾರ್ಯವನ್ನು ನಡೆಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದರು.

Advertisement

ಗುರುವಾರ ಜಿಲ್ಲಾ ಮಟ್ಟದ ಆರೋಗ್ಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಆಶಾ ಕಾರ್ಯಕರ್ತೆಯರು ಇದುವರೆಗೆ ನಗರ ವ್ಯಾಪ್ತಿಯಲ್ಲಿ 1.28 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದು, 5.16ಲಕ್ಷ ಜನರ ಆರೋಗ್ಯ ಸಮೀಕ್ಷೆ ಕೈಗೊಂಡಿದ್ದಾರೆ. ಇವರ ಪೈಕಿ 168 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಇದೇ ವೇಳೆ ಗ್ರಾಮೀಣ ಪ್ರದೇಶದಲ್ಲಿ 1.78 ಲಕ್ಷ ಮನೆಗಳಿಗೆ ಭೇಟಿ ನೀಡಿ 7.64 ಜನರ ಆರೋಗ್ಯ ಸಮೀಕ್ಷೆ ನಡೆಸಲಾಗಿದೆ. ಒಟ್ಟು 77 ಮಂದಿಯ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.

ಈ ಕಾರ್ಯವನ್ನು ಮತಗಟ್ಟೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಂಡು ಪ್ರತಿದಿನ ವರದಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದರು. ತಂಬಾಕು ಮಾರಾಟ ನಿಷೇಧ: ಸರ್ಕಾರ ಲಾಕ್‌ಡೌನ್‌ ನಲ್ಲಿ ಕೆಲವು ಸಡಿಲಿಕೆಗಳನ್ನು ಮಾಡಿದ್ದು, ಅದರಂತೆ ಕೆಲವು ಹೆಚ್ಚುವರಿ ಸೇವೆಗಳಿಗೆ ಅವಕಾಶ ಕಲ್ಪಿಸಿದೆ. ಆದರೆ ಈ ಸೇವೆಯನ್ನು ನೀಡುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಬೇಕು. ಬೀಡಿ, ಸಿಗರೇಟು, ಗುಟ್ಕಾ ಸೇರಿದಂತೆ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದ್ದು, ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸಿ ಆದೇಶಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಸರ್ಕಾರಿ ಕಚೇರಿಗಳು ಆರಂಭವಾಗಿದ್ದು, ಕಚೇರಿಗೆ ಆಗಮಿಸುವ ಸಾರ್ವಜನಿಕರ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯವಾಗಿ ನಡೆಸಬೇಕು. ಸರಕಾರಿ ಕಚೇರಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಿಯಮಿತವಾಗಿ ಕೀಟನಾಶಕ ಸಿಂಪಡಣೆ ಕಾರ್ಯ ಕೈಗೊಳ್ಳಬೇಕು. ಯಾವುದೇ ಸಭೆ, ಸಮಾರಂಭಗಳಲ್ಲಿ 10ಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಈಗಾಗಲೇ ಅನುಮತಿ ನೀಡಲಾಗಿರುವ
ಕಾರ್ಖಾನೆಗಳು ತಮ್ಮ ಕಾರ್ಮಿಕರಿಗೆ ಕಡ್ಡಾಯವಾಗಿ ವೈದ್ಯಕೀಯ ವಿಮೆ ಮಾಡಬೇಕು. ಕಂಪೆನಿಗಳು ಶಿಫ್ಟ್‌ ನಡುವೆ ಕನಿಷ್ಟ ಒಂದು ಗಂಟೆ ಕಾಲ ಅಂತರ ನೀಡಬೇಕು. ಊಟದ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಸೇರುವುದನ್ನು ತಪ್ಪಿಸಲು ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಅಪರ ಜಿಲ್ಲಾ ಧಿಕಾರಿ ಜಿ.ಅನುರಾಧಾ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ| ರಾಜೇಶ ಸುರಗಿಹಳ್ಳಿ ಮತ್ತಿತರ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next