ಔರಾದ: ಪಟ್ಟಣದ ರಾಮನಗರ ಬಡಾವಣೆಯಲ್ಲಿ ಕಳೆದ ಎರಡು ವಾರಗಳಿಂದ ಕುಡಿಯಲು ನೀರು ಸರಬರಾಜು ಆಗದಿರುವ ಹಿನ್ನೆಲೆಯಲ್ಲಿ ಬಡಾವಣೆಯ ನಿವಾಸಿಗಳು ಕುಡಿಯುವ ನೀರಿಗಾಗಿ ನಿತ್ಯ ಖಾಸಗಿ ವ್ಯಕ್ತಿಗಳ ಹೊಲಗದ್ದೆಗಳಿಗೆ ಅಲೆಯುವಂತಹ ಅನಿವಾರ್ಯತೆ ಬಂದಿದೆ.
ಇದು ಔರಾದ ಪಪಂ ವ್ಯಾಪ್ತಿಯಲ್ಲಿ ಬರುವ ಹಾಗೂ ಪಟ್ಟಣದಿಂದ 1 ಕಿಮೀ ದೂರದಲ್ಲಿರುವ ಬಡಾವಣೆಯ ನಿವಾಸಿಗಳ ಸ್ಥಿತಿಯಾಗಿದೆ. ಪ್ರತಿವರ್ಷ ಬೇಸಿಗೆ ಆರಂಭವಾಗುವ ಮುನ್ನವೇ ರಾಮನಗರ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಬಡಾವಣೆಯ ನಿವಾಸಿಗಳಿಂದ ಆಯ್ಕೆಯಾದ ಜನ ನಾಯಕರು ಶಾಶ್ವತ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ನೀಡಲು ವಿಫಲರಾಗಿದ್ದಾರೆ.
ಬಡಾವಣೆಯಲ್ಲಿ ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದ ಜನರು ಹೆಚ್ಚಾಗಿ ವಾಸವಾಗಿದ್ದಾರೆ. ರಾಮನಗರ ಬಡಾವಣೆಯಲ್ಲಿ ಒಟ್ಟು ಒಂದು ಸಾವಿರ ಜನಸಂಖ್ಯೆಯಿದೆ. ಬಡಾವಣೆಯಲ್ಲಿನ ಒಂದೇ ಒಂದು ಕೊಳವೆ ಬಾವಿ ಇದೆ. ಕಳೆದ ಆರು ತಿಂಗಳ ಹಿಂದೆ ಬಡಾವಣೆಯಲ್ಲಿನ ಕೊಳವೆ ಬಾವಿ ಹಾಳಾಗಿದೆ. ಹಾಳಾದ ಕೊಳವೆ ಬಾವಿ ದುರಸ್ತಿ ಮಾಡಲು ಅಧಿಕಾರಿಗಳು ಹಾಗೂ ಸದಸ್ಯರು ಮುಂದಾಗಿಲ್ಲ. ವಜರ ಬಾವಿಯಿಂದ ನೀರು ಸರಬರಾಜಾಗುವ ಮೋಟಾರ್ ಕೂಡಾ ಹಾಳಾದ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ನಿತ್ಯ ನೀರಿಗಾಗಿ ಅಲೆಯುವಂತಹ ಅನಿವಾರ್ಯತೆ ಬಂದಿದೆ.
ಈಗ ರಾಮನಗರ ಬಡಾವಣೆಯಲ್ಲಿ ಪಪಂನಿಂದ ಸರಬರಾಜು ಮಾಡುವ ನೀರು ಕಳೆದ ಎಂಟು ದಿನಗಳಿಂದ ಸರಬರಾಜು ಆಗುತ್ತಿಲ್ಲ. ಇದರಿಂದ ಬಡಾವಣೆ ನಿವಾಸಿಗಳು 1 ಕಿಮೀ ದೂರದಲ್ಲಿರುವ ಔರಾದ ಪಟ್ಟಣಕ್ಕೆ ಬಂದು ನೀರು ತೆಗೆದುಕೊಂಡು ಹೋಗಬೇಕು.
ಬಡಾವಣೆಯಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಶಾಶ್ವತ ಪರಿಹಾರ ನೀಡುವಂತೆ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಬಡಾವಣೆಯ ನಿವಾಸಿಗಳು ಪಪಂ ಅಧಿಕಾರಿಗಳಿಗೆ ಹಾಗೂ ಪಪಂ ಸದಸ್ಯರಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಬಡಾವಣೆಯಲ್ಲಿ ಹಾಳಾದ ಕೊಳವೆ ಬಾವಿ ಮೋಟಾರ್ ದುರಸ್ತಿ ಮಾಡಿದರೆ ಬಡಾವಣೆ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗುತ್ತದೆ ಎನ್ನುವುದು ನಿವಾಸಿಗಳ ಅಳಲು.ಬಡಾವಣೆಯಲ್ಲಿನ ಕೆಲ ಶ್ರೀಮಂತರು ತಮ್ಮ ಮನೆಗಳಿಗೆ 200ಲೀಟರ್ ನೀರಿಗೆ 300 ರೂ. ಹಣ ನೀಡಿ ಟ್ಯಾಂಕರ್ ಮೂಲಕ ಪಡೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ವರ್ಗದ ಜನರು ಒಂದು ಕಿಮೀ ದೂರದಿಂದ ಕಾಲ್ನಡಿಗೆ ಮೂಲಕ ಹೋಗಿ ನೀರು ತರುವಂತಹ ಸ್ಥಿತಿ ಬಂದಿದೆ.
ರಾಮನಗರ ಬಡಾವಣೆಯಲ್ಲಿ ಹಾಳಾದ ಮೋಟರ್ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪಟ್ಟಣದಲ್ಲಿನ ಸಮಸ್ಯೆಗಳು ಇದ್ದರೆ ನಮಗೂ ತಿಳಿಸಿ. ಆವಾಗ ಇಂಥ ವಿಷಯಗಳು ಪರಿಹರಿಸಲು ಯತ್ನಿಸಲಾಗುವುದು.
•ಸುನೀಲಕುಮಾರ ದೇಶಮುಖ, ಪಪಂ ಅಧ್ಯಕ್ಷ.
ಪ್ರತಿ ವರ್ಷ ಬೇಸಿಗೆ ಆರಂಭವಾದರೆ ಸಾಕು ಬಡಾವಣೆಯಲ್ಲಿ ನೀರಿನ ಸಮಸ್ಯೆ ಉಲ್ಬಣವಾಗುತ್ತದೆ. ಬಡಾವಣೆಯಲ್ಲಿರುವ ಕೊಳವೆ ಬಾವಿ ಹಾಳಾಗಿ ಆರು ತಿಂಗಳಾಗಿದೆ. ದುರಸ್ತಿ ಮಾಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಹಾಳಾದ ಮೋಟರ್ ದುರಸ್ತಿ ಮಾಡಲು ಅಧಿಕಾರಿಗಳು ಮುಂದಾಗಬೇಕು. ಇಲ್ಲವಾದಲ್ಲಿ ಪಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತೇವೆ.
•ಚಂದ್ರಕಲಾ ಒಡೆಯರ್, ಬಡಾವಣೆ ನಿವಾಸಿ.