Advertisement

ಕರುಂಬಿತ್ತಿಲ್‌ ಶಿಬಿರ ಸಂಗೀತ ಕಲಾವಿದರಿಗೆ ಶ್ರೇಷ್ಠ  ಪರಂಪರೆ

03:40 PM May 26, 2018 | Team Udayavani |

ನೆಲ್ಯಾಡಿ : ನಿಡ್ಲೆ ಗ್ರಾಮದ ಕರುಂಬಿತ್ತಿಲ್‌ನಲ್ಲಿ ವರ್ಷಂಪ್ರತಿ ನಡೆಯುತ್ತಿರುವ ಸಂಗೀತ ಶಿಬಿರವು ಚಿರಂಜೀವಿಯಾಗಿ ಮುಂದಿನ ತಲೆಮಾರಿನ ಯುವ ಉತ್ಸಾಹಿ ಸಂಗೀತ ಕಲಾವಿದರುಗಳಿಗೆ ಶ್ರೇಷ್ಠ ಪರಂಪರೆಯಾಗಿ ಮುಂದುವರೆಯಲಿ, ನನ್ನ ಜೀವಿತ ಕಾಲದವರೆಗೂ ನಾನು ಇಲ್ಲಿ ನಡೆಯುವ ಈ ಸಂಗೀತ ಶಿಬಿರದಲ್ಲಿ ಸ್ವಯಂ ಪ್ರೇರಿತನಾಗಿ ಭಾಗವಹಿಸುತ್ತೇನೆ ಎಂದು ನಾದಯೋಗಿ ವಿದ್ವಾನ್‌ ವಿ.ವಿ. ಸುಬ್ರಹ್ಮಣ್ಯಂ ನುಡಿದರು.

Advertisement

ಅವರು ನಿಡ್ಲೆಯ ಕರುಂಬಿತ್ತಿಲ್‌ನಲ್ಲಿ 19ನೇ ವರ್ಷದ ಸಂಗೀತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ವಿಜಯರಾಘವ ಪಡ್ವೆಟ್ನಾಯ ಮಾತನಾಡಿ, ಅಂತಾರಾಷ್ಟ್ರೀಯ ಖ್ಯಾತಿಯ ವಯಲಿನ್‌ ಕಲಾವಿದರಾದ ವಿದ್ವಾನ್‌ ವಿಠ್ಠಲ ರಾಮಮೂರ್ತಿ ಅವರು ಸಂಗೀತ ಕಲೆಯ ಮೇಲಿನ ಅತಿಯಾದ ಪ್ರೀತಿಯಿಂದ ವರ್ಷದಲ್ಲಿ ಒಂದು ಸಲ ಸಂಗೀತ ಕ್ಷೇತ್ರದ ಯುವ ಕಲಾವಿದರಿಗೆ ಇಲ್ಲಿ ಉಚಿತವಾಗಿ ಸಂಗೀತ ಕ್ಷೇತ್ರದ ದಿಗ್ಗಜರ ಮೂಲಕ ಸಂಗೀತ ರಸಧಾರೆಯನ್ನು ಉಣಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಸಂಗೀತ ಕಲೆಯ ಪೋಷಣೆ ಮೂಲಕ ಇಲ್ಲಿ ಉಳಿಸಿ ಬೆಳೆಸಲಾಗುತ್ತಿದೆ ಎಂದರು.

ಸಂಗೀತ ಶಿಬಿರದ ಸಂಯೋಜಕ, ವಯಲಿನ್‌ ಕಲಾವಿದ ವಿದ್ವಾನ್‌ ವಿಠ್ಠಲ  ರಾಮಮೂರ್ತಿ ಮಾತನಾಡಿ, ಇಲ್ಲಿ ನಡೆಯುವ ಸಂಗೀತ ಶಿಬಿರಗಳು ಇಲ್ಲಿಗೆ ಬಂದು ಭಾಗವಹಿಸಿದ ಸಂಗೀತ ಕ್ಷೇತ್ರದ ದಿಗ್ಗಜರ ಆಶೀರ್ವಾದದ ಫ‌ಲವಾಗಿವೆ. ಈ ಮನೆಯ ವಾತಾವರಣವೇ ನನಗೆ ಎಳವೆಯಲ್ಲಿ ಸಂಗೀತ ಕ್ಷೇತ್ರದಲ್ಲಿ ಮುನ್ನುಗ್ಗುವಂತೆ ಪ್ರೇರಣೆ ನೀಡಿದೆ. ಶಿಬಿರಾರ್ಥಿಗಳಾಗಿ ಬಂದು ಹೋಗಿರುವ ಯುವ ಕಲಾವಿದರು ಶಿಬಿರಕ್ಕೆ ಬರುವ ಮೇರು ಕಲಾವಿದರಿಗೆ ತೋರುವ ಪ್ರೀತಿ, ಗೌರವ, ಅಭಿಮಾನಗಳೇ ಇಲ್ಲಿಗೆ ಪ್ರತೀ ಶಿಬಿರಕ್ಕೆ ಆಗಮಿಸುವ ಹಿರಿಯ ಕಲಾವಿದರಿಗೆ ನೀಡುವ ಸಮ್ಮಾನವಾಗಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ವಿದ್ವಾನ್‌ ಅಭಿಷೇಕ್‌ ರಘುರಾಮ್‌, ಕೃತಿ ಭಟ್‌, ವಿದ್ವಾನ್‌ ಉಡುಪಿ ಗೋಪಾಲಕೃಷ್ಣ , ವಿದುಷಿ ಕೃಷ್ಣವೇಣಿ ಅಮ್ಮ, ವಿದುಷಿ ಚಂದ್ರಿಕಾ ವಿಠ್ಠಲ ರಾಮಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next