ಮುಂಬೈ: ಕೆಲ ದಿನಗಳ ಹಿಂದೆ ಪೆರೋಲ್ ಮೇಲೆ ಹೊರ ಬಂದಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅಪರಾಧಿ, ಬಾಂಬ್ ಡಾಕ್ಟರ್ ಎಂದೇ ಕುಖ್ಯಾತಿ ಪಡೆದಿದ್ದ ಜಲೀಸ್ ಅನ್ಸಾರಿ ಇದೀಗ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ವರದಿಯ ಪ್ರಕಾರ, ವೃತ್ತಿಯಲ್ಲಿ ವೈದ್ಯನಾಗಿದ್ದ ಜಲೀಸ್ ಅನ್ಸಾರಿ ಬಾಂಬ್ ತಯಾರಿಕಾ ತಜ್ಞನಾಗಿದ್ದ. ಈ ಹಿನ್ನೆಲೆಯಲ್ಲಿ ಅನ್ಸಾರಿ ಡಾ.ಬಾಂಬ್ ಎಂದೇ ಕುಖ್ಯಾತಿಯಾಗಿದ್ದ ಎಂದು ವಿವರಿಸಿದೆ. 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ ಅನ್ಸಾರಿ ಮುಂಬೈಯ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದ ಎಂದು ವರದಿ ತಿಳಿಸಿದೆ.
ಏತನ್ಮಧ್ಯೆ ಗುರುವಾರ ಬೆಳಗ್ಗೆಯಿಂದ ಅನ್ಸಾರಿ ಮನೆಯಿಂದ ನಿಗೂಢವಾಗಿ ಕಣ್ಮರೆಯಾಗಿರುವುದಾಗಿ ಕುಟುಂಬದ ಸದಸ್ಯರು ಮುಂಬೈನ ಅಗ್ರಿಪಾಡಾ ಪೊಲೀಸ್ ಠಾಣೆಗೆ ನಾಪತ್ತೆಯಾದ ಬಗ್ಗೆ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಜಲೀಸ್ ಅನ್ಸಾರಿ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದಾರೆ. ದೇಶಾದ್ಯಂತ ಸಂಭವಿಸಿದ 50 ಬಾಂಬ್ ಸ್ಫೋಟದ ಪ್ರಕರಣಗಳು ಅನ್ಸಾರಿ ವಿರುದ್ಧ ದಾಖಲಾಗಿದ್ದವು ಎಂದು ವರದಿ ವಿವರಿಸಿದೆ.
ಸರಣಿ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅನ್ಸಾರಿ ಇತ್ತೀಚೆಗಷ್ಟೇ ರಾಜಸ್ಥಾನದ ಅಜ್ಮೀರ್ ಸೆಂಟ್ರಲ್ ಜೈಲಿನಿಂದ 21 ದಿನಗಳ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ.