ಲಕ್ನೋ : ಅಯೋಧ್ಯೆಯ ರಾಮ ಜನ್ಮಭೂಮಿ ಭೂವಿವಾದದ ಕೇಸಿನಲ್ಲಿ ಓರ್ವ ಕಕ್ಷಿದಾರನಾಗಿರುವ ಇಕ್ಬಾಲ್ ಅನ್ಸಾರಿ ಅವರು ಇದೇ ನ.25ರಂದು ವಿವಿಧ ರಾಜಕೀಯ ಸಮೂಹಗಳು ಮತ್ತು ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಅಯೋಧ್ಯೆಗೆ ಹರಿದು ಬರಲಿರುವ ಕಾರಣ ಅಯೋಧ್ಯೆಯಲ್ಲಿನ ಮುಸ್ಲಿಮರಿಗೆ ಮತ್ತು ಹಿಂದುಗಳಿಗೆ ರಕ್ಷಣೆ ನೀಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ.
ಅಯೋಧ್ಯೆಯಲ್ಲಿನ ನ.25ರ ಸಂಭವನೀಯ ಸ್ಥಿತಿಯನ್ನು ಅನ್ಸಾರಿ ಅವರು 1992ರಲ್ಲಿ ಉದ್ಭವಿಸಿದ್ದ ಸ್ಥಿತಿಯನ್ನು ನೆನೆದುಕೊಂಡು ಗರಿಷ್ಠ
ರಕ್ಷಣೆಯನ್ನು ಆಗ್ರಹಿಸಿದ್ದಾರೆ.
“1992ರಲ್ಲಿ ನಾವು ವಿವಾದಿತ ಸ್ಥಳಕ್ಕೆ ಹೋಗೇ ಇರಲಿಲ್ಲ; ಆದಾಗ್ಯೂ ನಮ್ಮ ಮನೆಗಳನ್ನು ಸುಟ್ಟು ಹಾಕಲಾಯಿತು. 1992ರಂತೆ ಈ ನ.25ರಂದು ಅಯೋಧ್ಯೆಗೆ ಅದೇ ಪ್ರಮಾಣದಲ್ಲಿ ಹೊರಗಿನವರು ಹರಿದು ಬಂದಲ್ಲಿ ಸರಕಾರ ಇಲ್ಲಿನ ಮುಸ್ಲಿಮರು ಮತ್ತು ಹಿಂದುಗಳಿಗೆ ರಕ್ಷಣೆ ಕೊಡಲೇಬೇಕು’ ಎಂದು ಇಕ್ಬಾಲ್ ಅನ್ಸಾರಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
“ನನ್ನ ಭದ್ರತೆಗೆ ಇಬ್ಬರು ಭದ್ರತಾ ಸಿಬಂದಿಗಳನ್ನು ಕೊಡಲಾಗಿದೆ. ಆದರೆ ನನ್ನನ್ನು ಕಾಣಲು ಅನೇಕರು ಬರುತ್ತಿದ್ದಾರೆ. ಮೇಲಾಗಿ ನ.25ರಂದು ಇಲ್ಲಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ಬರುವ ಸಾಧ್ಯತೆ ಇದೆ. ಒಂದು ವೇಳೆ ನನ್ನ ಭದ್ರತೆಯನ್ನು ಮೇಲ್ಮಟ್ಟಕ್ಕೆ ಏರಿಸದೇ ಹೋದಲ್ಲಿ ನಾನು ನ.25ಕ್ಕೆ ಮೊದಲೇ ಇಲ್ಲಿಂದ ಬೇರೆ ಕಡೆಗೆ ಹೋಗುತ್ತೇನೆ’ ಎಂದು ಅನ್ಸಾರಿ ಹೇಳಿದರು.
ನ.25ರಂದು ತಾವು ಆಯೋಧ್ಯೆಗೆ ಹೋಗುವುದಾಗಿ ಈಗಾಗಲೇ ಆರ್‌ಎಸ್‌ಎಸ್, ಶಿವ ಸೇನೆ, ವಿಶ್ವ ಹಿಂದೂ ಪರಿಷತ್ ಮತ್ತು ಇತರರು ಈಗಾಗಲೇ ಘೋಷಿಸಿರುವುದು ಗಮನಾರ್ಹವಾಗಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಒತ್ತಾಯಿಸಿ ಹೂಂಕಾರ ರಾಲಿಗಾಗಿ ಆರ್‌ಎಸ್‌ಎಸ್ ಕರೆ ನೀಡಿದೆ. ಈ ರಾಲಿಯಲ್ಲಿ ಆರ್‌ಎಸ್‌ಎಸ್‌ನ ಉನ್ನತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಇದೇ ರೀತಿ ನ.25ರಂದು ತಾವು ಅಯೋಧ್ಯೆಗೆ ಹೋಗುವುದಾಗಿ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕ್ರೆ ಮತ್ತು ಇತರ ಸದಸ್ಯರು ಘೋಷಿಸಿದ್ದಾರೆ. ಆದರೆ ಶಿವಸೇನೆಯವರು ತಾವು ರಾಮ ಲಲ್ಲಾಗೆ ಪೂಜೆ ಸಲ್ಲಿಸುವ ಉದ್ದೇಶದಿಂದ ಮಾತ್ರವೇ ಅಯೋಧ್ಯೆಗೆ ಹೋಗುತ್ತಿರುವುದಾಗಿ ಹೇಳಿದ್ದಾರೆ.