ನವದೆಹಲಿ: ದೇಶದ ಹಾಲಿ ಏಳು ಮಂದಿ ಸಂಸದರು ಹಾಗೂ 199 ಶಾಸಕರು ಈವರೆಗೂ ತಮ್ಮ ಪಾನ್ ಕಾರ್ಡ್ ವಿವರವನ್ನು ಸಲ್ಲಿಸದಿರುವ ಅಂಶ ಬೆಳಕಿಗೆ ಬಂದಿದೆ. ಚುನಾವಣೆ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಪಾನ್ ವಿವರ ಅತ್ಯಗತ್ಯವಾಗಿದೆ.
ದೇಶದ ಒಟ್ಟು 542 ಲೋಕಸಭಾ ಸಂಸದರು ಹಾಗೂ 4,086 ಶಾಸಕರ ಪಾನ್ ಕಾರ್ಡ್ ವಿವರದ ಬಗ್ಗೆ ಅಸೋಸಿಯೇಶನ್ ಫಾರ್ ಡೆಮೋಕ್ರಟಿಕ್ ರೆಫಾರ್ಮ್ಸ್(ಎಡಿಆರ್) ಮತ್ತು ನ್ಯಾಶನಲ್ ಇಲೆಕ್ಷನ್ ವಾಚ್(ಎನ್ ಇಡಬ್ಲ್ಯು) ಸಂಗ್ರಹಿಸಿದ ಮಾಹಿತಿಯಲ್ಲಿ ಅಚ್ಚರಿಯ ವಿವರ ಹೊರಬಿದ್ದಿದೆ.
ಪಾನ್ ವಿವರ ನೀಡದ ಜನಪ್ರತಿನಿಧಿಗಳಲ್ಲಿ ಕಾಂಗ್ರೆಸ್ ಒಂದನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಪಕ್ಷದ 51 ಶಾಸಕರು, ಬಿಜೆಪಿಯ 42 ಶಾಸಕರು, ಸಿಪಿಐ(ಎಂ)ನ 25 ಶಾಸಕರು ಪಾನ್ ಮಾಹಿತಿ ಸಲ್ಲಿಸಿಲ್ಲ. ರಾಜ್ಯವಾರು ಕೇರಳ(33ಶಾಸಕರು) ಮೊದಲನೇ ಸ್ಥಾನದಲ್ಲಿದೆ. ಮಿಜೋರಾಂ(28ಶಾಸಕರು) ಹಾಗೂ ಆಂಧ್ರಪ್ರದೇಶ (19 ಶಾಸಕರು) 3ನೇ ಸ್ಥಾನದಲ್ಲಿದೆ ಎಂದು ಎಡಿಆರ್ ಪ್ರಕಟಣೆಯಲ್ಲಿ ತಿಳಿಸಿದೆ.
ಕುತೂಹಲಕಾರಿ ವಿವರ ಏನೆಂದರೆ, ಮಿಜೋರಾಂನ ವಿಧಾನಸಭೆಯ ಸದನದ ಬಲ 40, ಇದರಲ್ಲಿ 28 ಶಾಸಕರು ಪಾನ್ ವಿವರ ಸಲ್ಲಿಸಿಲ್ಲ. ಅದೇ ರೀತಿ ಒಡಿಶಾದ ಇಬ್ಬರು ಬಿಜೆಡಿ ಸಂಸದರು, ತಮಿಳುನಾಡಿನ ಇಬ್ಬರು ಎಐಡಿಎಂಕೆ ಸಂಸದರು ಹಾಗೂ ಅಸ್ಸಾಂ, ಮಿಜೋರಾಂ ಹಾಗೂ ಲಕ್ಷದ್ವೀಪದ ಸಂಸದರು ಪಾನ್ ಕಾರ್ಡ್ ವಿವರ ಸಲ್ಲಿಸಿಲ್ಲ ಎಂದು ವರದಿ ವಿವರಿಸಿದೆ.