Advertisement

199 ಗ್ರಾಮ ಪಂಚಾಯತ್‌ ಕಚೇರಿಗಳಲ್ಲಿ ಸೌರವಿದ್ಯುತ್‌ ಘಟಕ

01:55 AM Jun 26, 2022 | Team Udayavani |

ಮಂಗಳೂರು: ಸೌರವಿದ್ಯುತ್‌ ಉತ್ಪಾದನೆಯಲ್ಲಿ ಕರಾವಳಿಯ ಗ್ರಾಮ ಪಂಚಾಯತ್‌ಗಳು ದಾಪುಗಾಲಿಡುತ್ತಿದ್ದು ವಿದ್ಯುತ್‌ ಸ್ವಾವಲಂಬನೆಗೆ ಮುಂದಾಗಿವೆ.

Advertisement

ತಮ್ಮ ಕಚೇರಿ ಕಟ್ಟಡದಲ್ಲೇ ಸೌರವಿದ್ಯುತ್‌ ಘಟಕ ಅಳವಡಿಸಿಕೊಂಡು ಉತ್ಪಾದನೆಯಾಗುವ ವಿದ್ಯುತ್ತನ್ನು ಕಚೇರಿ ಕೆಲಸಕ್ಕೆ ಬಳಸುವ ಮೂಲಕ ನವೀಕರಿಸಬಹುದಾದ ಇಂಧನ ಬಳಕೆಗೆ ಆದ್ಯತೆ ನೀಡುವುದು ಮತ್ತು ವೆಚ್ಚ ಕಡಿತ ಮಾಡುವುದು ಇದರ ಉದ್ದೇಶ.

ಅವಿಭಜಿತ ದ.ಕ. ಜಿಲ್ಲೆಯ 199 ಗ್ರಾ.ಪಂ.ಗಳು ಈಗಾಗಲೇ ಸೌರವಿದ್ಯುತ್‌ ಘಟಕ ಅಳವಡಿಸಿಕೊಂಡಿವೆ. ದ.ಕ. ಜಿಲ್ಲೆಯ 223 ಗ್ರಾ.ಪಂ.ಗಳ ಪೈಕಿ 140 ಗ್ರಾ.ಪಂ.ಗಳು ಸೌರಫ‌ಲಕ ಅಳವಡಿಸಿಕೊಂಡಿದ್ದು ಇದರಲ್ಲಿ 16 ಗ್ರಾ.ಪಂ.ಗಳು ಸೌರವಿದ್ಯುತ್‌ ಉತ್ಪಾದಿಸಿ ಬಳಸುತ್ತಿವೆ. ಉಳಿದವುಗಳಲ್ಲಿ ಪೂರಕ ಪ್ರಕ್ರಿಯೆಗಳು ನಡೆಯುತ್ತಿವೆ. ಉಡುಪಿ ಜಿಲ್ಲೆಯ 155 ಗ್ರಾ.ಪಂ.ಗಳ ಪೈಕಿ 59 ಗ್ರಾ.ಪಂ.ಗಳು ಸೌರವಿದ್ಯುತ್‌ ಬಳಕೆ ಮಾಡುತ್ತಿವೆ. ಇನ್ನೂ ಮುಂದಕ್ಕೆ ಹೋಗಿ ಕೆಲವು ಗ್ರಾ.ಪಂ.ಗಳು ತಮ್ಮಲ್ಲಿ ಉತ್ಪಾದನೆಯಾಗುವ ಸೌರವಿದ್ಯುತ್ತನ್ನು ಮೆಸ್ಕಾಂ ಗ್ರಿಡ್‌ಗೆ ನೀಡಿ ತಮ್ಮ ವಿದ್ಯುತ್‌ ಬಿಲ್‌ನಲ್ಲಿ ಉಳಿತಾಯ ಮಾಡಿಕೊಳ್ಳುತ್ತಿವೆ.

10 ಕೆ.ವಿ. ವರೆಗೂ ಅವಕಾಶ
1 ಕೆವಿ(ಕಿಲೋ ವ್ಯಾಟ್‌)ಯಿಂದ 10 ಕೆವಿ ವರೆಗಿನ ಸಾಮರ್ಥ್ಯದ ಸೌರವಿದ್ಯುತ್‌ ಘಟಕಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಇದಕ್ಕೆ ನಿರ್ದಿಷ್ಟ ಅಂದಾಜು ಮೊತ್ತವನ್ನು ಸರಕಾರ ನಿಗದಿಪಡಿಸಿದೆ. ಗ್ರಾ.ಪಂ.ನ 14ನೇ ಹಣಕಾಸು, 15ನೇ ಹಣಕಾಸು, ಗ್ರಾಮವಿಕಾಸ, ಸ್ವಂತ ನಿಧಿ ಮೊದಲಾದ ಅನುದಾನಗಳನ್ನು ಬಳಸಿಕೊಂಡು ಸೌರಫ‌ಲಕಗಳನ್ನು ಅಳವಡಿಸಲಾಗುತ್ತಿದ್ದು ದ.ಕ.ದ ಗ್ರಾ.ಪಂ.ಗಳಲ್ಲಿ ಕನಿಷ್ಠ 85 ಸಾವಿರ ರೂ.ಗಳಿಂದ ಗರಿಷ್ಠ 4.80 ಲ.ರೂ. ವೆಚ್ಚದಲ್ಲಿ 1 ಕೆವಿಯಿಂದ 4 ಕೆವಿ ಸಾಮರ್ಥ್ಯದ ಘಟಕಗಳನ್ನು ಅಳವಡಿಸಿಕೊಂಡಿವೆ.

ಬಿಲ್‌ ಹೊರೆ ಇಳಿಕೆ
“ನಾವು 3 ಕೆವಿ ಸಾಮರ್ಥ್ಯದ ಸೌರವಿದ್ಯುತ್‌ ಘಟಕ ಅಳವಡಿಸಿಕೊಂಡಿದ್ದು 2.80 ಲ.ರೂ. ವೆಚ್ಚವಾಗಿದೆ. ಈ ಹಿಂದಿನ ವಿದ್ಯುತ್‌ ಬಿಲ್‌ಗೆ ಹೋಲಿಸಿದರೆ ಈಗ ಬಿಲ್‌ ಮೊತ್ತದಲ್ಲಿ ತುಂಬಾ ಕಡಿಮೆಯಾಗಿದೆ. ಹಿಂದೆ ತಿಂಗಳಿಗೆ ಸರಾಸರಿ 2,000 ರೂ. ಬಿಲ್‌ ಬರುತ್ತಿತ್ತು. ಕಳೆದ ತಿಂಗಳಲ್ಲಿ ಅದು 1,062 ರೂ.ಗೆ ಇಳಿದಿದೆ. ಪಂಚಾಯತ್‌ ಕಟ್ಟಡ ನವೀಕರಣಗೊಂಡು ವಿದ್ಯುತ್‌ ಪಾಯಿಂಟ್‌ಗಳ ಸಂಖ್ಯೆಯೂ ಇತ್ತೀಚೆಗೆ ಹೆಚ್ಚಾಗಿ ಹಿಂದಿಗಿಂತ ವಿದ್ಯುತ್‌ ಬಳಕೆ ಹೆಚ್ಚಾಗಿದ್ದರೂ ಬಿಲ್‌ ಮೊತ್ತದಲ್ಲಿ ತುಂಬಾ ಕಡಿಮೆಯಾಗಿದೆ’ ಎನ್ನುತ್ತಾರೆ ಉಡುಪಿ ಜಿಲ್ಲೆಯ ಬೆಳ್ವೆ ಗ್ರಾ.ಪಂ.ನ ಪಿಡಿಒ ಪ್ರಭಾಶಂಕರ್‌ ಪುರಾಣಿಕ್‌.

Advertisement

ಕಚೇರಿಗೆ ಬೇಕಾದ ವಿದ್ಯುತ್‌
ನಮ್ಮಲ್ಲಿ 3 ಕೆವಿ ಸಾಮರ್ಥ್ಯದ ಘಟಕದಿಂದ ಉತ್ಪಾದನೆಯಾಗುವ ಸೌರವಿದ್ಯುತ್ತನ್ನು ಮೆಸ್ಕಾಂ ಗ್ರಿಡ್‌ಗೆ ನೀಡುತ್ತಿದ್ದೆವು. ಅದರಿಂದಾಗಿ ವಿದ್ಯುತ್‌ ಬಿಲ್‌ನಲ್ಲಿ ಸುಮಾರು 200 ರೂ.ಗಳಷ್ಟು ಕಡಿತವಾಗುತ್ತಿತ್ತು. ಅದರಿಂದ ಅಷ್ಟೇನೂ ಪ್ರಯೋಜನ ಕಾಣಿಸದ ಕಾರಣ ನಮ್ಮಲ್ಲಿ ಉತ್ಪಾದನೆಯಾಗುವ ಸೌರವಿದ್ಯುತ್‌ನ್ನು ನಾವೇ ಬಳಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಮಡಂತ್ಯಾರು ಗ್ರಾ.ಪಂ. ಪಿಡಿಒ ಉಮೇಶ್‌.

ಉಡುಪಿ ಜಿಲ್ಲೆಯಲ್ಲಿ ಅಮೃತ ಗ್ರಾಮದಡಿ ಆಯ್ಕೆಯಾದ ಎಲ್ಲ ಗ್ರಾ.ಪಂ.ಗಳಿಗೂ ಸೌರವಿದ್ಯುತ್‌ ಘಟಕ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಇತರ ಗ್ರಾ.ಪಂ. ಕಚೇರಿಗಳಲ್ಲಿಯೂ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
 - ಎಚ್‌. ಪ್ರಸನ್ನ, ಉಡುಪಿ ಜಿ.ಪಂ. ಸಿಇಒ

ಜಿಲ್ಲೆಯ ಗ್ರಾ.ಪಂ. ಕಚೇರಿಗಳಲ್ಲಿ ಸೌರವಿದ್ಯುತ್‌ ಘಟಕ ಅಳವಡಿಕೆಗೆ ವೇಗ ನೀಡಲಾಗಿದೆ. ಎಲ್ಲ ಗ್ರಾ.ಪಂ.ಗಳು ಕೂಡ ಸೌರವಿದ್ಯುತ್‌ ಘಟಕ ಹೊಂದಿ ವಿದ್ಯುತ್‌ ಸ್ವಾವಲಂಬನೆ ಸಾಧಿಸಬೇಕೆಂಬುದು ನಮ್ಮ ಉದ್ದೇಶ.
– ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next