ಮಥುರಾ: ರಾಜಸ್ಥಾನದ ಹಿಂದಿನ ಭರತ್ಪುರ ಸಂಸ್ಥಾನದ ರಾಜವಂಶಸ್ಥ ರಾಜಮಾನ್ ಸಿಂಗ್ ಹತ್ಯೆ ಪ್ರಕರಣದಲ್ಲಿ 11 ನಿವೃತ್ತ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲಾ ನ್ಯಾಯಾಲಯ ಮಂಗಳವಾರ ಈ ಪ್ರಕರಣ ಸಂಬಂಧ ತೀರ್ಪು ನೀಡಿ, ರಾಜಸ್ಥಾನದ ದೀಗ್ ಪೊಲೀಸ್ ಠಾಣೆಯ ನಿವೃತ್ತ ಡಿವೈಎಸ್ಪಿ ಕಾನ್ ಸಿಂಗ್, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ವಿರೇಂದ್ರ ಸಿಂಗ್ ಸೇರಿದಂತೆ 11 ಪೊಲೀಸರನ್ನು ದೋಷಿಗಳು ಎಂದು ಪ್ರಕಟಿಸಿತ್ತು. ಬುಧವಾರ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸಿದೆ.
1985ರ ಫೆಬ್ರವರಿಯಲ್ಲಿ ರಾಜಸ್ಥಾನದ ಭರತ್ಪುರ ಸಂಸ್ಥಾನದ ರಾಜ ವಂಶಸ್ಥರಾಗಿದ್ದ ರಾಜಮಾನ್ ಸಿಂಗ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಕಣಕ್ಕಿಳಿದಿದ್ದ ನಿವೃತ್ತ ಐಎಎಸ್ ಅಧಿಕಾರಿ ಬ್ರಜೇಂದ್ರ ಸಿಂಗ್ ಪರ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಶಿವಚರಣ್ ಮಥುರ್ ರ್ಯಾಲಿ ಆಯೋಜಿಸಿದ್ದರು.
ಅಂದು ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಮೇಲೆ ರಾಜಮಾನ್ ಸಿಂಗ್ ಜೀಪು ನುಗ್ಗಿಸಿದ್ದರು. ಇದರಿಂದ ಹೆಲಿಕಾಪ್ಟರ್‌ಗೆ ಹಾನಿಯಾಗಿತ್ತು. ಮಾತ್ರವಲ್ಲದೆ ಪೊಲೀಸರು ಎನ್‌ಕೌಂಟರ್ ನಡೆಸಿ, ರಾಜಮಾನ್ ಸಿಂಗ್ ಹಾಗೂ ಅವರ ಇಬ್ಬರು ಬೆಂಬಲಿಗರನ್ನು ಹತ್ಯೆಗೈದಿದ್ದರು.
ಘಟನೆ ನಡೆದು 2 ದಿನಗಳ ಬಳಿಕ ಶಿವಚರಣ್ ಮಥುರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹತ್ಯೆ ಪ್ರಕರಣವನ್ನು ಅಂದು ಕೇಂದ್ರ ಸರಕಾರ ಸಿಬಿಐಗೆ ವಹಿಸಿತ್ತು. ರಾಜಸ್ಥಾನದ ಜೋಧ್‌ಪುರ ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದ ಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶದ ಮಥುರಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. 35 ವರ್ಷಗಳ ಬಳಿಕ ತೀರ್ಪು ನೀಡಲಾಗಿದೆ.