ಹೊಸದಿಲ್ಲಿ : 1984ರ ಸಿಕ್ಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟು ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಇದೇ ಡಿ.31ರಂದು ಕೋರ್ಟಿಗೆ ಶರಣಾಗುವ ಸಾದ್ಯತೆ ಇದೆ.
ಶರಣಾಗತನಾಗುವುದಕ್ಕೆ ಕಾಲಾವಕಾಶ ವಿಸ್ತರಣೆ ಕೋರಿದ್ದ ಸಜ್ಜನ್ ಕುಮಾರ್ ಮನವಿಯನ್ನು ದಿಲ್ಲಿ ಹೈಕೋರ್ಟ್ ತಿರಸ್ಕರಿಸಿರುವ ಕಾರಣ, ಆತ ತನ್ನ ಜೀವಾವಧಿ ಜೈಲು ಶಿಕ್ಷೆಯನ್ನು ಅನುಭವಿಸಲು ಡಿ.31ರಂದು ಕೋರ್ಟಿಗೆ ಶರಣಾಗುವುದು ಅಗತ್ಯವಾಗಿದೆ.
ಸುಪ್ರೀಂ ಕೋರ್ಟ್ ರಜಾ ಕಾಲ ಜನವರಿ 1ಕ್ಕೆ ಮುಗಿಯಲಿದೆ. ಅಷ್ಟರೊಳಗೆ ದಿಲ್ಲಿ ಹೈಕೋರ್ಟ್ ತೀರ್ಪಿನ ವಿರುದ್ಧದ ಸಜ್ಜನ್ ಕುಮಾರ್ ಅಪೀಲನ್ನು ಸುಪ್ರೀಂ ಕೋರ್ಟ್ ಮನ್ನಿಸುವ ಸಾಧ್ಯತೆ ತೀರ ಕಡಿಮೆ ಇದೆ ಎಂದು ಅವರ ಲಾಯರ್ ಹೇಳಿದ್ದಾರೆ.
“ನಾವು ದಿಲ್ಲಿ ಹೈಕೋರ್ಟ್ ತೀರ್ಪಿಗೆ ಬದ್ಧತೆಯನ್ನು ತೋರುವೆವು’ ಎಂದು ಸಜ್ಜನ್ ಕುಮಾರ್ ವಕೀಲ ಅನಿಲ್ ಕುಮಾರ್ ಶರ್ಮಾ ಹೇಳಿದ್ದಾರೆ.
1984ರ ಸಿಕ್ಖ್ ವಿರೋಧಿ ಗಲಭೆ ಕೇಸಿನಲ್ಲಿ ಡಿ.17ರಂದು ದಿಲ್ಲಿ ಹೈಕೋರ್ಟ್ ತೀರ್ಪು ನೀಡಿ, 73ರ ಹರೆಯದ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ತನ್ನ ಶೇಷಾಯುಷ್ಯವನ್ನು ಜೈಲಿನಲ್ಲಿ ಕಳೆಯಬೇಕು ಎಂದು ಆದೇಶಿಸಿತ್ತು.
1984ರ ದೊಂಬಿಯಲ್ಲಿ 2,700ಕ್ಕೂ ಅಧಿಕ ಸಿಕ್ಖರ ಮಾರಣ ಹೋಮ ನಡೆದಿತ್ತು. ಇದೊಂದು ಊಹಿಸಲಸಾಧ್ಯ ಪ್ರಮಾಣದ ಮಾರಣ ಹೋಮ ಎಂದು ದಿಲ್ಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.