Advertisement

1983: ಎ ಸ್ಪೆಶಲ್‌ ಸ್ಟೋರಿ !

11:39 AM Mar 28, 2018 | |

ಮಂಗಳೂರು: ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಗಳ ಸಹಿತವಾಗಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಮತ್ತು ಆಡಳಿತಾತ್ಮಕ ರಂಗಗಳ ಮಹತ್ವದ ಬದಲಾವಣೆಗೆ ಕಾರಣವಾದದ್ದು 1983ರ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ. ಮೈಸೂರು ಎಂಬ ಹೆಸರಿನಿಂದ ಕರ್ನಾಟಕ ಎಂಬುದಾಗಿ ಹೆಸರು ಬದಲಾವಣೆಗೊಂಡ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೂ ಇದು ಬದಲಾವಣೆಗೆ ನಾಂದಿಯಾಯಿತು.

Advertisement

ಮೈಸೂರು – ಬಳಿಕ ಕರ್ನಾಟಕ ರಾಜ್ಯದಲ್ಲಿ ಆರಂಭಿಕ ಚುನಾವಣೆಯ ಕಾಲದಿಂದಲೂ ಕಾಂಗ್ರೆಸ್‌ ಪ್ರಾಬಲ್ಯ ಹೊಂದಿತ್ತು. ವಿಭಜನೆಗಳು ಪಕ್ಷದಲ್ಲಿ ನಡೆದಿದ್ದರೂ ನೆಹರೂ, ಬಳಿಕ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್‌ ಪಕ್ಷವೇ ರಾಜ್ಯ ಸಹಿತ ದೇಶದಲ್ಲಿ ಪ್ರಾಬಲ್ಯ ಪಡೆದಿತ್ತು. ಆದರೆ ತುರ್ತು ಪರಿಸ್ಥಿತಿಯ ಅನಂತರದಲ್ಲಿ ಈ ಪ್ರಾಬಲ್ಯಕ್ಕೆ ಸ್ವಲ್ಪಮಟ್ಟಿನ ಧಕ್ಕೆಯಾಗಿದ್ದರೂ ಬಳಿಕ ಚೇತರಿಸಿಕೊಂಡಿತ್ತು. ಸ್ವ ಕ್ಷೇತ್ರದಲ್ಲಿ ಸೋತಿದ್ದ ಇಂದಿರಾಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಕೂಡ ಕರ್ನಾಟಕ; ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅವರು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ತುರ್ತು ಪರಿಸ್ಥಿತಿಯ ಸಂದರ್ಭದ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಜತೆಯಾಗಿ ಜನತಾ ಪಕ್ಷ ಸ್ಥಾಪನೆ ಯಾಯಿತು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೊರಾರ್ಜಿ ದೇಸಾೖ (1977-79); ಬಳಿಕ ಚರಣ್‌ಸಿಂಗ್‌ (1979-80) ಪ್ರಧಾನಿಯಾದರು. ಆಂತರಿಕ ಭಿನ್ನಮತ ಸ್ಫೋಟವಾಗಿ ಸರಕಾರ ಉರುಳಿತು. 1980ರ ಚುನಾವಣೆಯಲ್ಲಿ ಇಂದಿರಾ ಮತ್ತೆ ಪ್ರಧಾನಿಯಾದರು. ಈ ಎಲ್ಲ ಬೆಳವಣಿಗೆಗಳು ರಾಜ್ಯದ ರಾಜಕಾರಣದಲ್ಲೂ ಪ್ರಭಾವ ಬೀರಿದವು. ಹೀಗೆ 1978ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭಾರೀ ಗೆಲುವು ಸಾಧಿಸಿತು. 224ರಲ್ಲಿ 149 ಸ್ಥಾನಗಳ ಭರ್ಜರಿ ಗೆಲುವು. ಆಗ ತಾನೇ ರೂಪುಗೊಂಡಿದ್ದ ಜನತಾ ಪಕ್ಷಕ್ಕೆ ಕೇವಲ 59 ಸ್ಥಾನ. ಆ ಬಳಿಕ ಜನತಾ ಪಕ್ಷ ಸಂಪೂರ್ಣ ವಿಭಜನೆಯಾಯಿತು. ಆವರೆಗೆ ಅದರ ಘಟಕ ಪಕ್ಷವಾಗಿದ್ದ ಭಾರತೀಯ ಜನಸಂಘ ದೇಶದಲ್ಲಿ ಭಾರತೀಯ ಜನತಾ ಪಕ್ಷವಾಗಿ (ಬಿಜೆಪಿ) ಸಂಘಟನೆಯಾಯಿತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ 1983ರ ವಿಧಾನಸಭಾ ಚುನಾವಣೆ ನಡೆಯಿತು. ಯಾರೂ ನಿರೀಕ್ಷಿಸದ ಫಲಿತಾಂಶ ದಾಖಲಾಯಿತು. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಜನತಾ ಪಕ್ಷ- 95, ಕಾಂಗ್ರೆಸ್‌ 82, ಬಿಜೆಪಿ- 18, ಪಕ್ಷೇತರರು- 22, ಸಿಪಿಐ ಮತ್ತು ಸಿಪಿಐಎಂ ತಲಾ 3, ಆರ್‌ಪಿಐ-1. ಅತಂತ್ರ ಪರಿಸ್ಥಿತಿ! ಜನತಾ ಪಕ್ಷಕ್ಕೆ ಬಿಜೆಪಿ ಮತ್ತು ಕೆಲವು ಪಕ್ಷೇತರರ ಬೆಂಬಲ ದೊರೆಯಿತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.

ಈ ಫಲಿತಾಂಶದ ವಿಶೇಷವೆಂದರೆ, ಕಾಂಗ್ರೆಸ್‌ನ ಭದ್ರಕೋಟೆ ಎಂದು ಹೆಸರಾಗಿದ್ದ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಸಾಧನೆ ಮಾಡಿತು. ಒಟ್ಟು 15 ಕ್ಷೇತ್ರಗಳಲ್ಲಿ ಬಿಜೆಪಿಗೆ 8, ಕಾಂಗ್ರೆಸ್‌ ಮತ್ತು ಜನತಾ ಪಕ್ಷ ತಲಾ 3 ಮತ್ತು ಸಿಪಿಎಂಗೆ 1. ಮಂಗಳೂರು, ಉಡುಪಿ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ವಿಟ್ಲ, ಸುಳ್ಯ, ಬ್ರಹ್ಮಾವರ ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು ಒಲಿದು ಬಂತು.

Advertisement

ಮುಂದೆ ವಿವಿಧ ಚುನಾವಣೆಗಳಲ್ಲಿ ಈ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು 1983ರ ಚುನಾವಣೆಯೇ ಮುಖ್ಯ ಕಾರಣವಾಯಿತು!

ಆದರೆ ವಿವಿಧ ರಾಜಕೀಯ ಒತ್ತಡಗಳನ್ನು ಎದುರಿಸಬೇಕಾಗಿ ಬಂದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಿ ಚುನಾವಣೆಗೆ ಮುಂದಾದರು. 1985ರಲ್ಲಿ ನಡೆದ ಚುನಾವಣೆಯಲ್ಲಿ ಅವರ ನೇತೃತ್ವದ ಜನತಾ ಪಕ್ಷ ಅಧಿಕಾರಕ್ಕೆ ಬಂತು.

ಬಿಜೆಪಿ ಶಾಸಕರು
1983ರ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರು: ಡಾ| ವಿ.ಎಸ್‌. ಆಚಾರ್ಯ (ಉಡುಪಿ), ಕೆ. ರಾಮ ಭಟ್‌ (ಪುತ್ತೂರು), ವಿ. ಧನಂಜಯ ಕುಮಾರ್‌ (ಮಂಗಳೂರು), ಡಾ| ಬಿ.ಬಿ. ಶೆಟ್ಟಿ (ಬ್ರಹ್ಮಾವರ), ಕೆ. ರುಕ್ಮಯ ಪೂಜಾರಿ (ವಿಟ್ಲ), ಕೆ. ವಸಂತ ಬಂಗೇರ (ಬೆಳ್ತಂಗಡಿ), ಎನ್‌. ಶಿವರಾವ್‌ (ಬಂಟ್ವಾಳ), ಬಾಕಿಲ ಹುಕ್ರಪ್ಪ (ಸುಳ್ಯ).

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next