Advertisement

ದ.ಕ.: 196 ಮಂದಿಗೆ ಕೊವಿಡ್ 19 ಸೋಂಕು ದೃಢ, 5 ಸಾವು

01:10 AM Jul 13, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊವಿಡ್ 19 ಸೋಂಕು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು ರವಿವಾರ ಒಂದೇ ದಿನ 196 ಮಂದಿಗೆ ಸೋಂಕು ದೃಢ‌ಪಟ್ಟಿದೆ.

Advertisement

ಇದು ಇಷ್ಟರವರೆಗೆ ಒಂದೇ ದಿನದಲ್ಲಿ ವರದಿಯಾದ ಗರಿಷ್ಠ ಸಂಖ್ಯೆ. ಇದೇ ವೇಳೆಗೆ ಐವರು ಮೃತಪಟ್ಟಿದ್ದಾರೆ, 94 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧುಮೇಹ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ 72 ವರ್ಷದ ವೃದ್ಧ, 68 ವರ್ಷದ ಮಹಿಳೆ ಹಾಗೂ ಮಧುಮೇಹ, ಹೃದ್ರೋಗದಿಂದ ಬಳಲುತ್ತಿದ್ದ 58 ವರ್ಷದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅದೇ ರೀತಿ ವೆಂಟಿಲೇಟರ್‌ನಲ್ಲಿದ್ದ ಮಧುಮೇಹದಿಂದ ಬಳಲುತ್ತಿದ್ದ 50 ವರ್ಷದ ಪುರುಷ ಹಾಗೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 55 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅವರಲ್ಲಿ ಮೂವರು ಮಂಗಳೂರು ನಗರದವರು, ಓರ್ವರು ಬೆಳ್ತಂಗಡಿ ಹಾಗೂ ಇನ್ನೋರ್ವರು ಪುತ್ತೂರಿನವರು.

ಜಿಲ್ಲೆಯಲ್ಲಿ ರವಿವಾರ ವರದಿಯಾಗಿರುವ 196 ಪ್ರಕರಣಗಳಲ್ಲಿ 20 ಪ್ರಾಥಮಿಕ ಸಂಪರ್ಕ, 91ಮಂದಿ ಇನ್‌ಫ್ಲೂಯೆನ್ಷಾ ಲೈಕ್‌ ಇಲ್‌ನೆಸ್‌ (ಐಎಲ್‌ಐ), 16 ಮಂದಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ (ಸಾರಿ) ಪ್ರಕರಣಗಳಾಗಿವೆ. 10 ಮಂದಿ ವಿದೇಶದಿಂದ ಬಂದವರು. 57 ಮಂದಿ ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ. ಪ್ರಸವ ಪೂರ್ವ ಪರೀಕ್ಷೆಯಲ್ಲಿ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ. ಇನ್‌ಫ್ಲೂಯೆನ್ಷಾ ಲೈಕ್‌ ಇಲ್‌ನೆಸ್‌ (ಐಎಲ್‌ಐ) ಪ್ರಕರಣಗಳೂ ಗಣನೀಯ ಏರಿಕೆಯಾಗುತ್ತಿದ್ದು ರವಿವಾರ ಒಂದೇ ದಿನ 91 ಪ್ರಕರಣಗಳು ವರದಿಯಾಗಿವೆ.

Advertisement

ಸಾವಿನ ಸಂಖ್ಯೆ 46
ದ.ಕ. ಜಿಲ್ಲೆಯಲ್ಲಿ ಒಟ್ಟು 2,230 ಮಂದಿಗೆ ಕೊವಿಡ್ 19 ಸೋಂಕು ದೃಢಪಟ್ಟಿದ್ದು 876 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 46ಕ್ಕೇರಿದೆ. ಒಟ್ಟು 1,308 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಶನಿವಾರ ಒಂದೇ ದಿನ 186 ಮಂದಿಗೆ ಕೊವಿಡ್ 19 ಸೋಂಕು ದೃಢಪಟ್ಟಿತ್ತು.

ಇಬ್ಬರು ಮಾಧ್ಯಮ ಸಿಬಂದಿಗೆ ಸೋಂಕು
ರಾಜ್ಯಮಟ್ಟದ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಕೆಮರಾಮನ್‌ಗಳಿಗೂ ಕೊವಿಡ್ 19 ಸೋಂಕು ದೃಢಪಟ್ಟಿದ್ದು ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರತ್ಕಲ್‌: 9 ಪ್ರಕರಣ
ರವಿವಾರ ಕಾಟಿಪಳ್ಳದಲ್ಲಿ ಮೂವರು ಮಹಿಳೆಯರು, ಓರ್ವ ಪುರುಷನಿಗೆ ಕೊವಿಡ್ 19 ಸೋಂಕು ದೃಢಪಟ್ಟಿದೆ. ಕೋಡಿಕಲ್‌ನಲ್ಲಿ 2, ಎಂಆರ್‌ಪಿಎಲ್‌ 2 ಮತ್ತು ಜೋಕಟ್ಟೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಮನಪಾ ಆಯುಕ್ತರಿಗೆ ಕೊವಿಡ್ 19 ಸೋಂಕು ದೃಢ
ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಕೊವಿಡ್ 19 ಸೋಂಕು ದೃಢಪಟ್ಟಿದೆ. 2 ದಿನಗಳಿಂದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಗಂಟಲ ದ್ರವ ಮಾದರಿ ಪರೀಕ್ಷೆ ನಡೆಸಿದ್ದು, ರವಿವಾರದ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಳ್ಳಾಲ: ವೈದ್ಯರ ಸಹಿತ 18 ಮಂದಿಗೆ ಪಾಸಿಟಿವ್‌
ಖಾಸಗಿ ಆಸ್ಪತ್ರೆಯಲ್ಲಿರುವ ಇಬ್ಬರು ಪುರುಷ ರೋಗಿಗಳು, ಕುವೈಟ್‌ನಿಂದ ಆಗಮಿಸಿ ತೊಕ್ಕೊಟ್ಟಿನ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ನಾಲ್ವರು ಸೇರಿದಂತೆ ಉಳ್ಳಾಲ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 18 ಪ್ರಕರಣಗಳು ದಾಖಲಾಗಿವೆ. ಬಸ್ತಿಪಡ್ಪು ನಿವಾಸಿ ಮಹಿಳೆ, ಉಳ್ಳಾಲದ ಇಬ್ಬರು ಪುರುಷರು ಮತ್ತು ತೊಕ್ಕೊಟ್ಟಿನ ಯುವತಿ ಸೇರಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ನಾಲ್ವರು ಬಾಧಿತರಲ್ಲಿ ಒಳಗೊಂಡಿದ್ದಾರೆ.

ಉಳಿದಂತೆ ಖಾಸಗಿ ಆಸ್ಪತ್ರೆಯ ಯುವ ವೈದ್ಯ, ಕೋಟೆಕಾರು ದೇರಳಕಟ್ಟೆ ಮತ್ತು ಪಾನೀರಿನ ಮಹಿಳೆಯರು, ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯ ವ್ಯಕ್ತಿ, ಸೋಮೇಶ್ವರ ನಿವಾಸಿ, ಕಿನ್ಯ ಗ್ರಾಮದ ಮಹಿಳೆ, ತಲಪಾಡಿ ಕೆ.ಸಿ.ರೋಡ್‌ನ‌ ಯುವಕ, ಹರೇಕಳ ನ್ಯೂಪಡ್ಪುವಿನ ಮಹಿಳೆಗೆ ಸೋಂಕು ತಗಲಿದೆ.

ಶಾಸಕ ಡಾ| ಭರತ್‌ ಶೆಟ್ಟಿ ಗುಣಮುಖ
ಕೊವಿಡ್ 19 ಸೋಂಕಿಗೊಳಗಾಗಿದ್ದ ಶಾಸಕ ಡಾ| ಭರತ್‌ ಶೆಟ್ಟಿ ಅವರು ಗುಣಮುಖರಾಗಿದ್ದು, ರವಿವಾರ ಮನೆಗೆ ತೆರಳಿದ್ದಾರೆ.

ಮೂಡುಬಿದಿರೆ: ಇಬ್ಬರಿಗೆ ಸೋಂಕು
ಮಂಗಳೂರಿನಲ್ಲಿ ಆ್ಯಂಬುಲೆನ್ಸ್‌ ಚಾಲಕರಾಗಿರುವ ಮೂಡುಬಿದಿರೆ ಪುತ್ತಿಗೆಯ ನಿವಾಸಿ ಮತ್ತು ಮಂಗಳೂರಿನಲ್ಲಿ ವಾಸವಾಗಿರುವ ದರೆಗುಡ್ಡೆ ಮೂಲದ ಓರ್ವರಿಗೆ ಕೊವಿಡ್ 19 ಸೋಂಕು ಇರುವುದು ದೃಢಪಟ್ಟಿದ್ದು ಇಬ್ಬರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲ್ಕಿ: 2ನೇ ಪ್ರಕರಣ
ಮೂಲ್ಕಿ ನಗರದ ಮೊದಲ ಕೊವಿಡ್ 19 ಸೋಂಕಿನ ಪ್ರಕರಣವಾಗಿದ್ದ ಕಾರ್ನಾಡು ಸದಾಶಿವ ರಾವ್‌ ನಗರದ ಗರ್ಭಿಣಿಯ 42 ವರ್ಷ ಪ್ರಾಯದ ತಾಯಿಗೂ ಕೊವಿಡ್ 19 ಸೋಂಕು ಬಾಧಿಸಿರುವುದು ದೃಢಪಟ್ಟಿದೆ ಎಂದು ತಹಶಿಲ್ದಾರ್‌ ತಿಳಿಸಿದ್ದಾರೆ.

ಕಿನ್ನಿಗೋಳಿ: ಐವರಿಗೆ ಪಾಸಿಟಿವ್‌
ನಾಲ್ಕು ದಿನಗಳ ಹಿಂದೆ ಕೋವಿಡ್ 19 ಸೋಂಕು ದೃಢವಾಗಿ ಮಂಗಳೂರಿನ ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದ ಮೆನ್ನಬೆಟ್ಟು ಗ್ರಾ.ಪಂ. ವ್ಯಾಪ್ತಿಯ ರಾಜರತ್ನಪುರ ವಸತಿ ಗೃಹದ ನಿವಾಸಿಯ ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಗೂ ರವಿವಾರ ಪಾಸಿಟಿವ್‌ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಗೋಳಿಜೋರದಲ್ಲಿನ 3 ವರ್ಷದ ಬಾಲಕಿಗೂ ಕೊವಿಡ್ 19 ಪಾಸಿಟಿವ್‌ ದೃಢವಾಗಿದೆ. ಎಲ್ಲರನ್ನೂ ಮಂಗಳೂರು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next