ಚಿಕ್ಕಬಳ್ಳಾಪುರ: 90 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡುವ ರಾಜ್ಯ ಸರ್ಕಾರದ ಯೋಜನೆಯನ್ನು ಜಿಲ್ಲಾದ್ಯಂತ ಅನುಷ್ಠಾನಕ್ಕೆ ತರಲು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಪಡಿತರ ಚೀಟಿ ಸದಸ್ಯ ಇರುವ 90 ವರ್ಷ ದಾಟಿದ ಹಿರಿಯ ನಾಗರಿಕರು ಸಕಾಲಕ್ಕೆ ನ್ಯಾಯಬೆಲೆ ಅಂಗಡಿಗೆ ಬಂದು ಪಡಿತರ ಪಡೆಯಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸುವ ಯೋಜನೆ ರೂಪಿಸಿದೆ.
ಪ್ರಾಯೋಗಿಕವಾಗಿ ಜಾರಿ: ಜಿಲ್ಲೆಯಲ್ಲಿ ಏಕ ವ್ಯಕ್ತಿ ಇರುವ 90 ವರ್ಷ ದಾಟಿದ ಸುಮಾರು 193 ಪಡಿತರ ಚೀಟಿಗಳನ್ನು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಪಟ್ಟಿ ಮಾಡಿದ್ದು, ಅವರಿಗೆಲ್ಲಾ ನ್ಯಾಯಬೆಲೆ ಅಂಗಡಿ ಮೂಲಕ ವಿತರಿಸುವ ಪಡಿತರವನ್ನು ಅವರ ಮನೆಗೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಆಹಾರ ಇಲಾಖೆ ಕೈಗೊಂಡಿದ್ದು, ಸದ್ಯ ಜಿಲ್ಲೆಯಲ್ಲಿ 46 ಕುಟುಂಬಗಳಿಗೆ ಯೋಜನೆಯಡಿ ಪಡಿತರ ವಿತರಿಸುವ ಕಾರ್ಯಕ್ರಮವನ್ನು ಆಹಾರ ಇಲಾಖೆ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಮುಂದಾಗಿದೆ.
ಕೆಲವೊಂದು ಪಡಿತರ ದಾರರು ಮನೆಯಲ್ಲಿದ್ದು ಪಡಿತ ರವನ್ನು ಸ್ಪೀಕರಿಸಿದ್ದು, ಕೆಲವು ಕಡೆಗಳಲ್ಲಿ ಪಡಿತರ ವಿತರಿಸಲು ಹೋದ ಸಂದರ್ಭದಲ್ಲಿ ಹಿರಿಯ ನಾಗರಿಕರು ದನ, ಕುರಿ, ಮೇಯಿಸಲು ಹೋಗಿರುವುದು ಕಂಡು ಬಂದಿದೆ. ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ಮುಂದಾಗಿರುವ ಈ ಯೋಜನೆಯಡಿ ಕಂಡು ಬರುವ ಸಾಧಕ ಬಾಧಕಗಳನ್ನು ಪರಿಗಣಿಸಿ ನವೆಂಬರ್ ತಿಂಗಳಿಂದ 193 ಪಡಿತರದಾರರಿಗೆ ಅವರ ಮನೆ ಬಾಗಿಲಿಗೆ ಪಡಿತರ ವಿತರಿಸಲು ಆಹಾರ ಇಲಾಖೇ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಆಹಾರ ಇಲಾಖೆ ಉಪ ನಿರ್ದೇಶಕರಾದ ಪಿ.ಸವಿತಾ ಹೇಳಿದ್ದೇನು?: 90 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವರ ಮನೆಗೆ ಬಾಗಿಲಿಗೆ ಪಡಿತರವನ್ನು ತಲುಪಿಸುವ ಯೋಜನೆಯನ್ನು ಇಲಾಖೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಯೋಜನೆ ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ 46 ಕುಟುಂಬಗಳಿಗೆ ನಮ್ಮ ಇಲಾಖೆ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿ ಮೂಲಕ ಪಡಿತರವನ್ನು ನೀಡಲಾಗುತ್ತಿದೆ. ಈ ವೇಳೆ ಕೆಲವರು ಮನೆಯಲ್ಲಿ ಇಲ್ಲದೇ ದನ, ಕುರಿ ಮೇಯಿಸಲಿಕ್ಕೆ ಹೋಗುತ್ತಿರುವುದರಿಂದ ಮನೆಯಲ್ಲಿ ಸಿಗುತ್ತಿಲ್ಲ. ಕೆಲವರು ಮನೆಯಲ್ಲಿದ್ದು ಪಡಿತರ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಯೋಜನೆ ವ್ಯಾಪ್ತಿಗೆ ಬರುವ ಅರ್ಹ ಕುಟುಂಬಗಳಿಗೆ ಅವರ ಮನೆ ಬಾಗಿಲಿಗೆ ಪಡಿತರವನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲೆಯ ಆಹಾರ ಮತ್ತು ನಾಗರಿಕರ ಸರಬರಾಜು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರಾದ ಪಿ.ಸವಿತಾ ಉದಯವಾಣಿಗೆ ತಿಳಿಸಿದರು.
– ಕಾಗತಿ ನಾಗರಾಜಪ್ಪ