ಹೊಸದಿಲ್ಲಿ: ಪ್ರಸಕ್ತ ವರ್ಷದ ಮುಂಗಾರು ಮಳೆಯು ದೇಶಾದ್ಯಂತ ವಿಕೋಪ ಸೃಷ್ಟಿಸಿದ್ದು, ಕರ್ನಾಟಕದ 106 ಮಂದಿ ಸೇರಿದಂತೆ ದೇಶ ದಲ್ಲಿ ಒಟ್ಟು 1,900 ಮಂದಿಯ ಜೀವ ಬಲಿ ಪಡೆದಿದೆ. ಅಷ್ಟೇ ಅಲ್ಲ, ಈ ಬಾರಿಯ ಮಳೆ, ಪ್ರವಾಹದಿಂದಾಗಿ 22 ರಾಜ್ಯಗಳ 25 ಲಕ್ಷಕ್ಕೂ ಅಧಿಕ ಮಂದಿ ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಮುಂಗಾರು ಋತುವು ಸೆಪ್ಟಂಬರ್ 30ರಂದೇ ಅಧಿಕೃತವಾಗಿ ಮುಗಿದಿದ್ದರೂ, ದೇಶದ ಕೆಲವು ಭಾಗಗಳಲ್ಲಿ ಅದಿನ್ನೂ ಸಕ್ರಿಯ ವಾಗಿದೆ. ಕಳೆದ 4 ತಿಂಗಳ ಅವಧಿಯಲ್ಲಿ ದೇಶವು 1994ರ ಬಳಿಕ ಅತ್ಯಧಿಕ ಮಳೆಯನ್ನು ಕಂಡಿದೆ ಎಂದು ಈಗಾಗಲೇ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಸ್ಥಿತಿ: ಈ ಮಳೆಗಾಲದಲ್ಲಿ ರಾಜ್ಯದ ಹಲವು ಕಡೆ ಉಂಟಾದ ದಿಢೀರ್ ಮಳೆ ಹಾಗೂ ಪ್ರವಾಹ ಸಂಬಂಧಿ ಘಟನೆಗಳಲ್ಲಿ ಒಟ್ಟು 106 ಮಂದಿ ಪ್ರಾಣತೆತ್ತಿದ್ದಾರೆ. 14 ಮಂದಿ ಗಾಯಗೊಂಡಿದ್ದಾರೆ ಹಾಗೂ 6 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 13 ಜಿಲ್ಲೆಗಳಲ್ಲಿ ಪ್ರಾಕೃತಿಕ ವಿಕೋಪ ತಲೆದೋರಿದ ಪರಿಣಾಮ, 2.48 ಲಕ್ಷ ಮಂದಿ 3,233 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯು ವಂತಾಗಿದೆ ಎಂದೂ ಗೃಹ ಇಲಾಖೆ ಮಾಹಿತಿ ನೀಡಿದೆ.
ಎಷ್ಟು ರಾಜ್ಯಗಳಲ್ಲಿ ಸಂಕಷ್ಟ?- 22
-ದೇಶಾದ್ಯಂತ ಮಳೆ, ಪ್ರವಾಹಕ್ಕೆ ಬಲಿಯಾದವರು- 1,900 ಮಂದಿ
-ವರುಣನಬ್ಬರದಿಂದ ಬಳಲಿದವರು -25 ಲಕ್ಷಕ್ಕೂ ಹೆಚ್ಚು ಮಂದಿ
-ಗಾಯಗೊಂಡವರು – 738
-ಸಾವಿಗೀಡಾದ ಜಾನುವಾರುಗಳು- 20,000
-ಹಾನಿಗೀಡಾದ ಮನೆಗಳು 1.09 ಲಕ್ಷ
-ಭಾಗಶಃ ಹಾನಿಗೀಡಾದ ಮನೆಗಳು- 2.05 ಲಕ್ಷ
– ಎಷ್ಟು ಹೆಕ್ಟೇರ್ ಪ್ರದೇಶದ ಬೆಳೆ ಹಾನಿ?- 14.14 ಲಕ್ಷ ಹೆಕ್ಟೇರ್