ಮಧ್ಯಪ್ರದೇಶ : ಗಂಗೆಯನ್ನು ಭೂಮಿಗೆ ಕರೆತಂದ ಭಗೀರಥನಂತೆ ಬುಂದೇಲ್‌ಖಂಡ್ ನ ಬಬಿತಾ ರಜಪೂತ್ ಬರದಿಂದ ನಲಗುತ್ತಿದ್ದ ತನ್ನೂರಿನಲ್ಲಿ ಜಲಕ್ರಾಂತಿ ಮಾಡಿದ್ದಾರೆ.
ಮಧ್ಯಪ್ರದೇಶದ ಆಗ್ರೋಥ ಗ್ರಾಮದಲ್ಲಿ ಮೊದಲಿಂದಲೂ ಜೀವಜಲಕ್ಕೆ ಪರಿತಪಿಸುವ ಪರಿಸ್ಥಿತಿ ಇತ್ತು. ವರ್ಷದಲ್ಲಿ ಎರಡ್ಮೂರು ಸಾರಿ ಬೀಳುವ ಮಳೆ ನೀರು ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ನೀರಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದವು. ವರ್ಷಕ್ಕೆ ಒಂದು ಬೆಳೆ ಬೆಳಯಲು ಹರಸಾಹಸ ಪಡುವ ದುಸ್ಥಿತಿ ಈ ಗ್ರಾಮಕ್ಕೆ ಬಂದೋದಗಿತ್ತು. ಬೇಸಿಗೆ ಕಾಲದಲ್ಲಿ ದೂರದ ಊರಿಂದ ನೀರು ತರಲು ಮಕ್ಕಳು ಶಾಲೆಯನ್ನೇ ಬಿಡಬೇಕಾಗುತ್ತಿತ್ತು.
ಆಗ್ರೋಥ ಗ್ರಾಮದಲ್ಲಿ 70 ಎಕರೆ ವಿಸ್ತೀರ್ಣದ ಕೆರೆಯಿದ್ದರೂ ನೀರಿಲ್ಲದೆ ಬರಿದಾಗಿತ್ತು. ಮಳೆಯಿಂದ ಸಂಗ್ರಹವಾಗುವ ಅಲ್ಪ ಪ್ರಮಾಣದ ನೀರು ಗ್ರಾಮಸ್ಥರಿಗೆ ಸಾಕಾಗುತ್ತಿರಲಿಲ್ಲ. 2018 ರಲ್ಲಂತೂ ಈ ಗ್ರಾಮಕ್ಕೆ ಮಳೆರಾಯನ ದರುಶನ ಅಪರೂಪವಾಗಿತ್ತು. ಕೇವಲ ಎರಡು ಬಾರಿ ಮಾತ್ರ ಮಳೆ ಸುರಿಯಿತು. ಈ ನೀರು ಕೂಡ ಹರಿದು ಪೊಲಾಯಿತು.
ಜಲಕ್ರಾಂತಿಗೆ ಪಣ ತೊಟ್ಟ ಬಬಿತಾ :
ಡಿಗ್ರಿ ಮುಗಿಸಿರುವ ಬಬಿತಾ ತಮ್ಮ ಗ್ರಾಮದ ನೀರಿನ ಸಮಸ್ಯೆ ಹೋಗಲಾಡಿಸಲು ಪಣ ತೊಡುತ್ತಾಳೆ. ಬೆಟ್ಟದಿಂದ ಹರಿದು ಪೊಲಾಗುವ ನೀರನ್ನು ಕೆರೆಗೆ ತರಲು ಯೋಜನೆ ರೂಪಿಸುತ್ತಾಳೆ. ಇದಕ್ಕಾಗಿ ಕಾಲುವೆ ತೋಡಬೇಕಾಗುತ್ತದೆ. ಕೆರೆಯ ಸುತ್ತಮುತ್ತಲಿನ ಜಾಗ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದ್ದರಿಂದ ಇದಕ್ಕೆ ಅನುಮತಿ ದೊರೆಯುವುದಿಲ್ಲ. ಆದರೆ, ಅಧಿಕಾರಿಗಳಿಗೆ ತನ್ನೂರಿನ ಪರಿಸ್ಥಿತಿ ತಿಳಿ ಹೇಳಿ ಕಾಲುವೆ ನಿರ್ಮಿಸಲು ಅನುಮತಿ ಪಡೆಯುತ್ತಾಳೆ ಈ ಗಟ್ಟಿ ಗಿತ್ತಿ.
7 ತಿಂಗಳ ಕಾಲ ಪ್ರರಿಶ್ರಮ :
ಮಳೆಯ ನೀರನ್ನು ಕೆರೆಗೆ ತರಲು ಮುಂದಾದ ಬಬಿತಾ, ತಾನೇ ಕಾಲುವೆ ನಿರ್ಮಿಸಲು ಪಿಕಾಸಿ ಹಿಡಿದು ಮುಂದಾಗುತ್ತಾಳೆ. ಇವಳಿಗೆ ಊರಿನ 200 ಮಹಿಳೆಯರು ಕೈ ಜೋಡಿಸುತ್ತಾರೆ. 7 ತಿಂಗಳಿನಲ್ಲಿ ಕಾಲುವೆ ಸಿದ್ಧವಾಗುತ್ತೆ. ಈ ಸಾಹಸಿಯರ ಬೆವರು ಹನಿಯ ಪ್ರತೀಕವಾಗಿ ಕಳೆದ ಒಂದು ವರ್ಷದಿಂದ ಊರಿನ ಕೆರೆ ತುಂಬಿ ತುಳುಕುತ್ತಿದೆ.
ತುಂಬಿತು ಕೆರೆ, ನೀಗಿತು ಬರದ ಹೊರೆ :
ಮನಸಿದ್ದರೆ ಮಾರ್ಗ ಎಂಬುವುದಕ್ಕೆ ಈ ಊರಿನ ಬಬಿತಾ ಸಾಕ್ಷಿಯಾಗಿದ್ದಾರೆ. ಇವರು ಮಾಡಿರುವ ಜಲಕ್ರಾಂತಿಗೆ ಊರಿನ ಸಮಸ್ಯೆ ದೂರವಾಗಿದೆ. ಬರದಿಂದ ನಲುಗುತ್ತಿದ್ದ ಆಗ್ರೋಥ ಗ್ರಾಮದಲ್ಲಿ ನೀರಿನ ಸಮಸ್ಯೆ ನೀಗಿದೆ. ಮಳೆಯ ನೀರು ನೇರವಾಗಿ ಕೆರೆಗೆ ಹರಿದು ಬರುತ್ತಿದೆ. ಪರಿಣಾಮ ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಿದ್ದಾರೆ ಇಲ್ಲಿಯ ರೈತರು.
2020ರಲ್ಲಿಯೂ ಕಡಿಮೆ ಮಳೆಯಾಯಿತು. ಆದರೂ 10 ಬಾವಿ, 5 ಬೋರ್ ವೆಲ್ ಗಳು ನೀರು ಚಿಮ್ಮುತ್ತಿವೆ. ನನ್ನ 12 ಎಕರೆ ಜಮೀನು ಈಗ ನೀರಾವರಿಯಾಗಿದೆ ಎನ್ನುತ್ತಾರೆ ಈ ಗ್ರಾಮದ ರೈತ ರಾಮರತನ್ ರಜಪೂತ್.