ಜೈಪುರ: ನಿರ್ಬಂಧಿತ ಹುಲಿ ಸಂರಕ್ಷಿತ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹತ್ತೊಂಬತ್ತು ವಾಹನವಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ಈ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆದಿದೆ. ಮಳೆಗಾಲದ ಕಾರಣ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಜಂಗಲ್ ಸಫಾರಿಯನ್ನು ರದ್ದುಗೊಳಿಸಲಾಗಿದೆ. ಆದರೆ ಆಗಸ್ಟ್ 15 ರಂದು ಹಲವು ಐಷಾರಾಮಿ ವಾಹನಗಳಲ್ಲಿ ಬಂದ ತಂಡ ನೇರವಾಗಿ ನಿರ್ಬಂಧಿತ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸಿದ್ದಾರೆ. ಅಲ್ಲದೆ ನಿರ್ಬಂಧ ವಿಧಿಸಿರುವುದು ಪ್ರವಾಸಿಗರಿಗೆ ಗೊತ್ತಿರುವ ವಿಚಾರ ಆದರೂ ಅರಣ್ಯ ಇಲಾಖೆಯ ಮಾತಿಗೆ ಬೆಲೆ ಕೊಡದೆ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರವೇಶ ಮಾಡಿದ್ದಾರೆ ಈ ಕುರಿತು ವಿಚಾರ ಗೊತ್ತಾಗುತ್ತಿದ್ದಂತೆ ಅರಣ್ಯ ಅಧಿಕಾರಿಗಳ ತಂಡ ನಿಷೇಧಿತ ಪ್ರದೇಶಕ್ಕೆ ತೆರಳಿ ಅಲ್ಲಿದ್ದ ಸುಮಾರು ಹತ್ತೊಂಬತ್ತು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರುತು ಮಾಹಿತಿ ನೀಡಿದ ಅಧಿಕಾರಿಗಳು, ನಿಷೇಧಿತ ಹುಲಿ ಸಂರಕ್ಷಿತ ಪ್ರದೇಶಕ್ಕೆಅಕ್ರಮವಾಗಿ ಪ್ರವೇಶಿಸಿದ ತಂಡ ಅಲ್ಲಿನ ಕೆಲ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿದ್ದೂ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ ಈ ವಿಚಾರ ನಮ್ಮ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ನಮ್ಮ ತಂಡ ರಣಥಂಬೋರ್ ರಾಷ್ಟ್ರೀಯ ಉದ್ಯಾನ ವಲಯ ಪ್ರವೇಶಿಸಿ ಅಲ್ಲಿದ್ದ 14 ವಾಹನಗಳನ್ನು ವಶಕ್ಕೆ ಅಡೆದುಕೊಂಡಿತು ಇದಾದ ಬಳಿಕ ಇದೆ ತಂಡಕ್ಕೆ ಸಂಬಂದಿಸಿದ ಇತರ ಐದು ವಾಹನಗಳನ್ನು ಹತ್ತಿರದ ಹೋಟೆಲ್ ಬಳಿ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ವಶಪಡಿಸಿಕೊಂಡ ಐಷಾರಾಮಿ ವಾಹನಗಳು ರಾಜಸ್ಥಾನ, ಹರಿಯಾಣ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ನಂಬರ್ ಪ್ಲೇಟ್‌ಗಳನ್ನು ಹೊಂದಿವೆ ಎಂದು ವಿಭಾಗೀಯ ಅರಣ್ಯಾಧಿಕಾರಿ ರಮಾನಂದ್ ಭಾಕರ್ ತಿಳಿಸಿದ್ದಾರೆ. ಬಿಗಿಯಾದ ಕಣ್ಗಾವಲು ಹೊರತಾಗಿಯೂ ಪ್ರವಾಸಿಗರು ನಿರ್ಬಂಧಿತ ಪ್ರದೇಶಕ್ಕೆ ಹೇಗೆ ಪ್ರವೇಶಿಸಿದರು ಎಂಬುದನ್ನು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.