Advertisement

ಅವೈಜ್ಞಾನಿಕ ಪೈಪ್‌ಲೈನ್‌ ಕಾಮಗಾರಿಗೆ 19 ಲಕ್ಷ ರೂ.!

11:30 PM Nov 21, 2019 | Team Udayavani |

ಕೋಟ: ಕೋಟ ಗೋ ಆಸ್ಪತ್ರೆ ಸಮೀಪ ವಿರುವ ಸರಕಾರಿ ಬಾವಿಯಿಂದ ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಹಲವು ಭಾಗಕ್ಕೆ ನೀರು ಸರಬರಾಜಾ ಗುತ್ತಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹತ್ತಾರು ವರ್ಷದ ಹಿಂದೆ ಪೈಪ್‌ಲೈನ್‌ ಮಾಡಲಾಗಿತ್ತು. ಆದರೆ ಚತುಷ್ಪಥ ಕಾಮಗಾರಿಯ ಸಂದರ್ಭ ರಸ್ತೆ ವಿಸ್ತರಣೆಗೊಂಡಿದ್ದರಿಂದ ಕುಂದಾಪುರ-ಉಡುಪಿ ಕಡೆಯ ಮುಖ್ಯ ರಸ್ತೆಯ ಮಧ್ಯದಲ್ಲಿ ಪೈಪ್‌ಲೈನ್‌ ಸೇರಿಕೊಂಡಿದೆ.

Advertisement

ಹೀಗಾಗಿ ಆಗಾಗ ಪೈಪಿಗೆ ಹಾನಿಯಾಗುತ್ತಿದ್ದು ದುರಸ್ತಿ ನಡೆಸಲು ಸಾಧ್ಯ ವಾಗುತ್ತಿಲ್ಲ. ಈ ಸಮಸ್ಯೆ ಬಗೆಹರಿಸಲು ಪ.ಪಂ. 14ನೇ ಹಣಕಾಸು ನಿಧಿಯಿಂದ ಇದೀಗ 19.35ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ಪೈಪ್‌ಲೈನ್‌ ಕಾಮಗಾರಿ ಕೈಗೆತ್ತಿಕೊಂಡಿದೆ. ಆದರೆ ವಿಚಿತ್ರವೆಂಬಂತೆ ಮತ್ತೆ ಪುನಃ ಸರ್ವೀಸ್‌ ರಸ್ತೆಗೆ ಮೀಸಲಿಟ್ಟಿರುವ ಜಾಗದಲ್ಲೇ ಹೊಸ ಕಾಮಗಾರಿ ನಡೆಸಲಾಗುತ್ತಿದೆ.

ಸರ್ವಿಸ್‌ ರಸ್ತೆಯೊಳಗೆ ಪೈಪ್‌ಲೈನ್‌
ಇದೀಗ ಕಾಮಗಾರಿ ನಡೆಯುತ್ತಿರುವ ಸ್ಥಳ ಸರ್ವಿಸ್‌ ರಸ್ತೆಗೆ ಮೀಸಲಿರಿಸಿದ ಜಾಗವಾಗಿದೆ. ಸಾಲಿಗ್ರಾಮ ಗಿರಿಜಾ ಕಲ್ಯಾಣಮಂಟಪದಿಂದ ಮೀನು ಮಾರುಕಟ್ಟೆ ತನಕ ಎರಡೂ ಕಡೆಗಳಲ್ಲಿ 6ಮೀ. ಸರ್ವಿಸ್‌ರಸ್ತೆ ಹಾಗೂ 1 ಮೀ. ಚರಂಡಿ ಪ್ರಥಮ ಹಂತದಲ್ಲೇ ಮಂಜೂರಾಗಿದ್ದು ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಕೋಟ ಹೈಸ್ಕೂಲ್‌ ಭಾಗದಲ್ಲೂ ಹೆಚ್ಚುವರಿಯಾಗಿ ಸರ್ವಿಸ್‌ ರಸ್ತೆಯ ಬೇಡಿಕೆ ಇದೆ. ಆದ್ದರಿಂದ ಈಗ ಹೊಸದಾಗಿ ನಿರ್ಮಿಸುತ್ತಿರುವ ಪೈಪ್‌ಲೈನ್‌ ಕೂಡ ಸರ್ವಿಸ್‌ ರಸ್ತೆ ಒಳಭಾಗಕ್ಕೆ ಸೇರುವುದು ಖಚಿತವಾಗಿದ್ದು ಲಕ್ಷಾಂತರ ರೂ. ವ್ಯರ್ಥವಾಗಲಿದೆ.

ಮುಂದಾಲೋಚನೆ ಕೊರತೆ
ಸಾಲಿಗ್ರಾಮದಲ್ಲಿ ಸರ್ವಿಸ್‌ ರಸ್ತೆಗೆ ಮಂಜೂರಾತಿ ದೊರೆತಿರುವುದು ಹಾಗೂ ಕೋಟ ಹೈಸ್ಕೂಲ್‌ ಆಸುಪಾಸಿನಲ್ಲಿ ಬೇಡಿಕೆ ಇರುವುದು ಸ್ಥಳೀಯಾಡಳಿತದ ಗಮನದಲ್ಲಿದೆ. ಇದನ್ನು ತಿಳಿದೂ ಕಾಮಗಾರಿಗೆ ಮುಂದಾಗಿರುವುದು ವಿಪರ್ಯಾಸ. ಚತುಷ್ಪಥ ಕಾಮಗಾರಿ ಸಂದರ್ಭ ರಸ್ತೆಯ ಅಕ್ಕ-ಪಕ್ಕದ 30ಮೀ. ಜಾಗವನ್ನು ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ಈ ಸ್ಥಳದಲ್ಲಿ ಪೈಪ್‌ಲೈನ್‌ ನಡೆಸಲು ಯಾವುದೇ ಸಮಸ್ಯೆ ಇಲ್ಲ. ಆದರೆ ಹೆದ್ದಾರಿ ಪ್ರಾಧಿಕಾರ ಮತ್ತು ನವಯುಗದವರು ಸೂಕ್ತ ಸಹಕಾರ ನೀಡಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ಕಾಮಗಾರಿ ನಡೆಸಲಾಗುತ್ತಿದೆ.

ಕಾಮಗಾರಿ ಸ್ಥಗಿತಕ್ಕೆ ಆಗ್ರಹ
ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಲಕ್ಷಾಂತರ ರೂ. ವ್ಯರ್ಥ ಮಾಡುತ್ತಿರುವ ಪ.ಪಂ.ನ ಕಾರ್ಯ ವೈಖರಿಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಮತ್ತು ಕಾಮಗಾರಿಯನ್ನು ತತ್‌ಕ್ಷಣ ಸ್ಥಗಿತಗೊಳಿಸಬೇಕಾಗಿ ಆಗ್ರಹಿಸಿದ್ದಾರೆ.

Advertisement

ಪೇಟೆ ವಾರ್ಡ್‌ನಲ್ಲಿ ಕಾಮಗಾರಿಗೆ ಅವಕಾಶವಿಲ್ಲ
ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು 14ನೇ ಹಣಕಾಸು ನಿಧಿಯ 19.35ಲಕ್ಷ ಹಣವನ್ನು ವ್ಯರ್ಥ ಮಾಡುತ್ತಿದ್ದಾರೆ. ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಪೇಟೆ ವಾರ್ಡ್‌ನಲ್ಲಿ ಸರ್ವಿಸ್‌ ರಸ್ತೆ ಜಾಗದಲ್ಲಿ ಪೈಪ್‌ಲೈನ್‌ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ.
-ರತ್ನಾ ನಾಗರಾಜ್‌,ಪೇಟೆ ವಾರ್ಡ್‌ ಸದಸ್ಯರು

ಕಾಮಗಾರಿ ಸ್ಥಳದ ಮಾಹಿತಿ ಇಲ್ಲ
ತುರ್ತು ಕುಡಿಯುವ ನೀರಿನ ಕಾಮಗಾರಿ ಎನ್ನುವ ಕಾರಣಕ್ಕೆ ಅನುಮತಿ ನೀಡಿದ್ದೇನೆ. ಆದರೆ ಸರ್ವಿಸ್‌ ರಸ್ತೆ ಜಾಗದಲ್ಲಿ ಪೈಪ್‌ಲೈನ್‌ ಮಾಡಲಾಗುತ್ತಿದೆ ಎನ್ನುವುದು ತಿಳಿದಿಲ್ಲ. ಈ ಕುರಿತು ಪರಿಶೀಲನೆ ನಡೆಸುತ್ತೇನೆ.
-ಕಿರಣ್‌ ಗೋರಯ್ಯ,
ಕಾರ್ಯನಿರ್ವಹಣಾಧಿಕಾರಿ ಪ.ಪಂ.

ಎನ್‌.ಎಚ್‌.ಎ.ಐ. ಅನುಮತಿ ಪಡೆಯಲಾಗಿದೆ
ಹೆದ್ದಾರಿ ಪ್ರಾಧಿಕಾರ ಹಾಗೂ ನವಯುಗ ಸ್ಥಳಪರಿಶೀಲಿಸಿ ಕಾಮಗಾರಿ ನಡೆಸಲು ಅನುಮತಿ ನೀಡಿದ್ದಾರೆ ಮತ್ತು ಸರ್ವಿಸ್‌ ರಸ್ತೆ ನಿರ್ಮಾಣವಾದರೂ ಯಾವುದೇ ಸಮಸ್ಯೆ ಇಲ್ಲ ಎಂದು ಭರವಸೆ ನೀಡಿದ್ದಾರೆ.
-ಅರುಣ್‌ ಕುಮಾರ್‌,ಮುಖ್ಯಾಧಿಕಾರಿ ಪ.ಪಂ.

-ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next