ಧಾರವಾಡ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಮರಳಿ ಪಡೆದರು.
ಅಂತಿಮವಾಗಿ ಕಣದಲ್ಲಿ ಉಳಿದಿರುವ 19 ಅಭ್ಯರ್ಥಿಗಳಿಗೆ ಭಾರತ ಚುನಾವಣಾ ಆಯೋಗದ ವೀಕ್ಷಕ ಸಮೀರ್‌ಕುಮಾರ್
ಬಿಸ್ವಾಸ್ ಅವರ ಸಮ್ಮುಖದಲ್ಲಿ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ದೀಪಾ ಚೋಳನ್ ಚಿಹ್ನೆಗಳನ್ನು ಹಂಚಿಕೆ ಮಾಡಿದರು. ನಾಮಪತ್ರಗಳನ್ನು ವಾಪಸ್ ಪಡೆಯಲು ಮಧ್ಯಾಹ್ನ 3 ಗಂಟೆವರೆಗೆ ಅವಕಾಶವಿತ್ತು.
ಭ್ರಷ್ಟಾಚಾರ ಮಿಟಾವೋ ಪಕ್ಷದ ಅಭ್ಯರ್ಥಿ ಪ್ರಕಾಶ ದೊಡ್ಡವಾಡ, ಪಕ್ಷೇತರ ಅಭ್ಯರ್ಥಿಗಳಾದ ಗುರಪ್ಪ ತೋಟದ, ರಾಯನಗೌಡ ದ್ಯಾಮನಗೌಡ ಕುಮಾರದೇಸಾಯಿ, ರಾಜಶೇಖರಯ್ಯ ಕಂತಿಮಠ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡರು. ಮಧ್ಯಾಹ್ನ 3 ಗಂಟೆ ನಂತರ ಹಾಜರಿದ್ದ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರ ಸಮ್ಮುಖದಲ್ಲಿ ಕ್ರಮ ಸಂಖ್ಯೆ ಹಾಗೂ ಚಿಹ್ನೆಗಳನ್ನು ಹಂಚಿಕೆ ಮಾಡಿ, ಅನುಮೋದನೆಗಾಗಿ ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಿ ಕೊಡಲಾಯಿತು.
ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು : ಈರಪ್ಪ ಹರಿಜನ ಉರ್ಫ್ ಮಾದರ (ಬಹುಜನ ಸಮಾಜ ಪಕ್ಷ), ಪ್ರಹ್ಲಾದ ಜೋಶಿ (ಬಿಜೆಪಿ ), ವಿನಯ ಕುಲಕರ್ಣಿ (ಕಾಂಗ್ರೆಸ್), ಗಂಗಾಧರ ಬಡಿಗೇರ್ (ಎಸ್ ಯುಸಿಐ), ಸಂತೋಷ ನಂದೂರ (ಉತ್ತಮ ಪ್ರಜಾಕೀಯ ಪಕ್ಷ),ರೇವಣಸಿದ್ದಪ್ಪ ಬಸವರಾಜ ತಳವಾರ (ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ),ರಾಜು ಕಾಂಬಳೆ (ಆಜಾದ್ ಮಜ್ದೂರ ಕಿಸಾನ್ ಪಕ್ಷ), ವಿನೋದ್ ಘೋಡಕೆ (ಪ್ರೌಟಿಸ್ಟ್ ಬ್ಲಾಕ್ ಇಂಡಿಯಾ), ವಾದಿರಾಜ್ ಮನ್ನಾರಿ (ಆಲ್‌ಇಂಡಿಯಾ ಹಿಂದೂಸ್ತಾನ್ ಕಾಂಗ್ರೆಸ್ ಪಕ್ಷ), ಸೋಮಶೇಖರ್ ಯಾದವ್ (ಭಾರಿಪ ಬಹುಜನ ಮಹಾಸಂಘ) ಹಾಗೂ ಪಕ್ಷೇತರರಾಗಿ ಉದಯಕುಮಾರ್ ಅಂಬಿಗೇರ, ಮಕುಖಾನ್ ಸರ್‌ದೇಸಾಯಿ, ಮಲ್ಲಿಕಾರ್ಜುನಗೌಡ ಬಾಳನಗೌಡ್ರ, ರಾಜು ಅನಂತಸಾ ನಾಯಕವಾಡಿ, ಶಕೀಲ್ ಅಹ್ಮದ್ ದೊಡವಾಡ, ವೀರಪ್ಪ ಮಾರಡಗಿ, ಅಬ್ದುಲ್ ರೆಹೆಮಾನ್ ದುಂಡಸಿ, ಬಸವರಾಜ ಸಂಗಣ್ಣವರ, ಹಸೀನಬಾನು ಟಪಾಲವಾಲೆ ಅಂತಿಮವಾಗಿ ಕಣದಲ್ಲುಳಿದಿದ್ದಾರೆ.
ಜೆಡಿಯು ಪಕ್ಷದ ಅಭ್ಯರ್ಥಿಯಾಗಿ ಗುರಪ್ಪ ತೋಟದ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದರೆ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಬಿ ಫಾರಂ ನೀಡದ ಕಾರಣ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲಾಗಿತ್ತು. ಆದರೆ ಈಗ ಅವರು ತಮ್ಮ ನಾಮಪತ್ರ ಹಿಂಪಡೆಯುವುದರ ಜೊತೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದಾರೆ.