ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಅಂತಾರಾಷ್ಟ್ರೀಯ,ಅಂತಾರಾಜ್ಯ ಹಾಗೂ ಸ್ಥಳೀಯ ಸೇರಿ 19 ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 6 ಕೆ.ಜಿ ಹ್ಯಾಶಿಸ್ ಆಯಿಲ್, 51.89 ಕೆ.ಜಿ.ಗಾಂಜಾ, 140 ಗ್ರಾಂ ಎಂಡಿಎಂಎ ಕ್ರಿಸ್ಟಲ್, 236 ಎಕ್ಸೈಸಿ ಮಾತ್ರೆಗಳು, 34 ಎಲ್‌ಎಸ್‌ಡಿ ಸ್ಟ್ರಿಪ್ಸ್, 23 ಗ್ರಾಂ ಕೋಕೇನ್, 17 ಮೊಬೈಲ್‌ಗಳು, ಒಂದು ಕಾರು, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ವಿಲ್ಸನ್‌ಗಾರ್ಡನ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನೆರೆ ರಾಜ್ಯ ಗಳಿಂದ ಬರುತ್ತಿದ್ದ ಗಾಂಜಾ ಮತ್ತು ಹ್ಯಾಶಿಸ್ ಆಯಿಲ್ ಅನ್ನು ಗ್ರಾಹಕರ ವಿಳಾಸಕ್ಕೆ ತಲುಪಿಸಿ, ಒಂದು ಸಾವಿರ ರೂ. ಕಮಿಷನ್ ಪಡೆಯುತ್ತಿದ್ದರು. ಬೇಗೂರು ಠಾಣೆ ವ್ಯಾಪ್ತಿಯಲ್ಲಿ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳು ಕಾರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಕೇರಳದಿಂದ ಬೆಂಗಳೂರಿಗೆ ಮಾದಕ ವಸ್ತು ತಂದು ಮಾರಾಟ ಮಾಡುತ್ತಿದ್ದರು. ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇರಳ ಮೂಲದ 7 ಮಂದಿಯನ್ನು ಬಂಧಿ ಸಲಾಗಿದ್ದು, ಆಫ್ರಿಕನ್ ಪ್ರಜೆಗಳಿಂದ ಕಡಿಮೆ ಮೊತ್ತಕ್ಕೆ ಡ್ರಗ್ಸ್ ಖರೀದಿಸಿ ಡೆಂಝೋ ಮತ್ತು ಪೋರ್ಟರ್ ಅಪ್ಲಿಕೇಷನ್‌ಗಳ ಮೂಲಕ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಜಿರಿಯಾ ಮತ್ತು ಐವರಿಕೋಸ್ಟ್ ಮೂಲದ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ಪ್ರವಾಸಿ ವೀಸಾ ಪಡೆದು ಬೆಂಗಳೂರಿಗೆ ಬಂದು ಅಕ್ರಮ ದಂಧೆಯಲ್ಲಿ ತೊಡಗಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈಜಿರಿಯಾ ಪ್ರಜೆ ಬಂಧಿಸಿದ್ದು, ನಾಲ್ಕು ವರ್ಷಗಳ ಹಿಂದೆ ವ್ಯವಹಾರಿಕ ವೀಸಾ ಪಡೆದು ಭಾರತಕ್ಕೆ ಬಂದು ಆರು ತಿಂಗಳಿಂದ ಡ್ರಗ್ಸ್ ಪೆಡ್ಲರ್ ಆಗಿದ್ದಾನೆ. ಹೀಗೆ ಪುಲಕೇಶಿನಗರ, ಹೆಣ್ಣೂರು, ಯಲಹಂಕ,ಕೆ.ಆರ್‌ಪುರ, ಆರ್.ಟಿ.ನಗರ ಠಾಣೆ ವ್ಯಾಪ್ತಿ ಯಲ್ಲಿ ಸ್ಥಳೀಯ ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶ ದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಪರಿಚಯಸ್ಥ ಗಿರಾಕಿಗಳಿಗೆ, ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.