Advertisement

Dharwad: ಮರಳಿ ಒಂದಾದ 19 ದಂಪತಿ; 30 ವರ್ಷಗಳ ಸುದೀರ್ಘ‌ ವ್ಯಾಜ್ಯ ಅಂತ್ಯ

04:24 PM Sep 18, 2023 | Team Udayavani |

ಧಾರವಾಡ: ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವಿವಾಹ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದ ಒಟ್ಟು 19 ದಂಪತಿಗಳಲ್ಲಿ ರಾಜಿ ಮಾಡಿಸಿ, ಮತ್ತೆ ಒಂದುಗೂಡಿಸುವಲ್ಲಿ ಸೆ.9ರಂದು ಜರುಗಿದ ರಾಷ್ಟ್ರೀಯ ಲೋಕ ಅದಾಲತ್‌ ಯಶಸ್ವಿಯಾಗಿದೆ. ಇದರ ಜತೆಗೆ ಒಟ್ಟು 70,599 ಪ್ರಕರಣಗಳಲ್ಲಿ ರಾಜಿ ಸಂಧಾನ ಕೈಗೊಂಡು 60,87,357 ರೂ. ಮೊತ್ತ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕೆ.ಜಿ. ಶಾಂತಿ ಹೇಳಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡದಲ್ಲಿ-15 ಪೀಠಗಳನ್ನು, ಹುಬ್ಬಳ್ಳಿಯಲ್ಲಿ-18 ಪೀಠಗಳನ್ನು, ಕುಂದಗೋಳ-2, ನವಲಗುಂದ-2 ಮತ್ತು ಕಲಘಟಗಿಯಲ್ಲಿ-2 ಸೇರಿ ಒಟ್ಟು 39 ಪೀಠಗಳನ್ನು ಲೋಕ ಅದಾಲತ್‌ಗಾಗಿ ಸ್ಥಾಪಿಸಲಾಗಿತ್ತು.

ಈ ಪೀಠಗಳಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜಿ ಆಗಬಹುದಾದಂತಹ 18,864 ಪ್ರಕರಣಗಳನ್ನು
ತೆಗೆದುಕೊಂಡು ಅವುಗಳ ಪೈಕಿ 13,589 ಪ್ರಕರಣಗಳನ್ನು ಹಾಗೂ 65,600 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡು
ಅವುಗಳ ಪೈಕಿ 57,010 ಪ್ರಕರಣಗಳನ್ನು ಸೇರಿ ಒಟ್ಟು 70,599 ರಾಜಿ ಸಂಧಾನ ಮಾಡಿಸಿ ಒಟ್ಟು 60,87,39,357 ಮೊತ್ತವನ್ನು ವಸೂಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಧಾರವಾಡದ ಪ್ರಧಾನ ಹಿರಿಯ ಸಿವಿಲ್‌ ಮತ್ತು ಸಿಜೆಎಂ ನ್ಯಾಯಾಧೀಶರಾದ ಸಂಜಯ ಪಿ. ಗುಡಗುಡಿ ಮತ್ತು ಸಂಧಾನಕಾರರಾದ ಬಿ.ಡಿ. ನರಸಗೌಡ ಅವರನ್ನೊಳಗೊಂಡ ಲೋಕ ಅದಾಲತ್‌ ಪೀಠದಲ್ಲಿ 96 ವರ್ಷದ ಹಿರಿಯ ನಾಗರಿಕ ಬಸನಗೌಡ ಯಲ್ಲಪ್ಪಗೌಡ ಮರಿಯಪ್ಪಗೌಡ ಅವರು ವಿಭಾಗದ ದಾವೆಯಲ್ಲಿ ತಮ್ಮ ಆಸ್ತಿಯನ್ನು ಸಂತೋಷದಿಂದ ತಮ್ಮ ಮಗನಿಗೆ ಬಿಟ್ಟು ಕೊಡುವ ಮೂಲಕ ತಮ್ಮ ದೊಡ್ಡತನ ಮೆರೆದು ಕುಟುಂಬದವರೆಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.

ಧಾರವಾಡದ 1ನೇ ಅಧಿಕ ಹಿರಿಯ ಸಿವಿಲ್‌ ನ್ಯಾಯಾ ಧೀಶರಾದ ವಿಜಯಲಕ್ಷ್ಮೀ ಗಣಾಪುರ ಮತ್ತು ಸಂಧಾನಕಾರರಾದ ಕಸ್ತೂರಿ ಗಡಾದ ಅವರನ್ನೊಳಗೊಂಡ ಲೋಕ ಅದಾಲತ್‌ ಪೀಠದಲ್ಲಿ 30 ಜನ ಪಕ್ಷಗಾರರಿದ್ದ ಆಸ್ತಿ ವಿಭಾಗದ ದಾವೆಯು ಸಹ ರಾಜಿ
ಆಗಿದ್ದು, ಅದರಲ್ಲಿ ಹಿರಿಯ ನಾಗರಿಕರು ಸಹ ಭಾಗಿಯಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

30 ವರ್ಷಗಳ ಸುದೀರ್ಘ‌ ವ್ಯಾಜ್ಯ ಅಂತ್ಯ
ಧಾರವಾಡದ 3ನೇ ಅಧಿಕ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಮಹೇಶ ಚಂದ್ರಕಾಂತ ಅವರು ಮತ್ತು ಸಂಧಾನಕಾರರಾದ ಗಿರೀಶ್‌ಕುಮಾರ ಕನಸೋಗಿ ಅವರನ್ನೊಳಗೊಂಡ ಲೋಕ ಅದಾಲತ್‌ ಪೀಠದಲ್ಲಿ 1980ರ ಕ್ರಯದ ಕರಾರು ಪತ್ರದ ಆಧಾರದ ಮೇಲೆ ನೋಂದಣಿ ಕ್ರಯಪತ್ರ ಬರೆದುಕೊಡಲು ಆದೇಶಿಸುವಂತೆ 1994ರಲ್ಲಿ ಸಲ್ಲಿಸಿದ್ದ ದಾವೆ ಯಶಸ್ವಿಯಾಗಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡ ಕಕ್ಷಿದಾರರು ತಮ್ಮ 30 ವರ್ಷಗಳ ಸುದೀರ್ಘ‌ ವ್ಯಾಜ್ಯಕ್ಕೆ ಮಂಗಳ ಹಾಡಿದ್ದಾರೆ.

ಇದೇ ನ್ಯಾಯಾಲಯದಲ್ಲಿ ಧಾರವಾಡ ಲೈನ್‌ ಬಜಾರದ ಹನುಮಂತ ದೇವಸ್ಥಾನದ ವ್ಯಾಜ್ಯವನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಂಡ ಕಕ್ಷಿದಾರರು ಪಾಳೆ ಪ್ರಕಾರ ದೇವಸ್ಥಾನದ ಪೂಜೆ ಮಾಡಲು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next