Advertisement

ಕರಿಮೆಣಸು ಆಮದು ನಿಷೇಧ ಸಹಿತ 19 ಹಕ್ಕೊತ್ತಾಯ ಮಂಡನೆ

09:32 PM Jun 25, 2019 | Team Udayavani |

ಮಡಿಕೇರಿ :ಕೊಡಗು ಜಿಲ್ಲೆಯಲ್ಲಿ ಕಾಫಿ ಮತ್ತು ಕರಿಮೆಣಸು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ ಗೋಣಿಕೊಪ್ಪದಲ್ಲಿ ದುಂಡು ಮೇಜಿನ ಸಂವಾದ ರವಿವಾರ ನಡೆಯಿತು.

Advertisement

ಕಿತ್ತಳೆ ಬೆಳಗಾರರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಬೆಳೆಗಾರರ ಸಮಸ್ಯೆಗಳು, ಮಳೆಹಾನಿ ಕೊಡಗಿನ ಪುನರ್‌ನಿರ್ಮಾಣ, ಆನೆ ಮತ್ತು ಮಾನವ ಸಂಘರ್ಷ ತಪ್ಪಿಸಲು ಕ್ರಮ, ಕರಿಮೆಣಸು ಆಮದು ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ‌ ಕಾಡ್ಯಮಾಡ ಮನುಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 19 ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ‌ ಬಡಗಲಪುರ ನಾಗೇಂದ್ರ ಮಾತನಾಡಿ, ಮಲೆನಾಡು ಭಾಗದ ಕಾಫಿ ಹಾಗೂ ಕಾಳು ಮೆಣಸು ಬೆಳೆಗಾರರ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು. ವಿವಿಧ ಸಭೆಗಳು ಹಾಗೂ ಹೋರಾಟದ ಮೂಲಕ ಜಿಲ್ಲೆಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಸಂಘದ ರಾಯಚೂರಿನ ಹಿರಿಯ ಗೌರವ ಅಧ್ಯಕ್ಷ ಚಾಮರಸ ಪಾಟೀಲ್‌, ಕೃಷಿಸಾಲ ಸೇರಿದಂತೆ ರೈತರು ಪಡೆಯುವ ಸಾಲಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕು ಮತ್ತು ಸಾಲ ಮರುಪಾವತಿಸಲು ಹತ್ತು ವರ್ಷಗಳ ಕಾಲಾವಕಾಶ ನೀಡಬೇಕೆಂದರು. ಸಂಯೋಜಕ ಕೆ.ಕೆ.ವಿಶ್ವನಾಥ್‌ ಮಾತನಾಡಿ ,ಕೊಡಗು ಜಿಲ್ಲೆಯಲ್ಲಿ ವಾಸಿಸು ತ್ತಿರುವ ರೈತರು ಹಾಗೂ ಬೆಳೆಗಾರರು ಅರಣ್ಯವನ್ನು ಅತಿಕ್ರಮಣ ಮಾಡಿಕೊಂಡು ಪ್ರಾಣಿಗಳನ್ನು ಓಡಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ ಕೇಂದ್ರ ಸರಕಾರದ ಬಳಿ ಇರುವುದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲವೆಂದು ಆರೋಪಿಸಿದರು.

ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಮಾತನಾಡಿ ಜಿಲ್ಲೆಯಲ್ಲಿ ಹೋರಾಟ ನಡೆಸಲು ಮುಂದೆ ಬರುವವರ ಸಂಖ್ಯೆ ಕಡಿಮೆ ಇದೆ ಮತ್ತು ನಮ್ಮೊಳಗಿನ ಒಗ್ಗಟ್ಟಿನ ಕೊರತೆಯೇ ವೈಫ‌ಲ್ಯಗಳಿಗೆ ಕಾರಣವಾಗಿದೆ ಎಂದರು. ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬುಲಿರ ಹರೀಶ್‌ ಮಾತನಾಡಿ ರಸಗೊಬ್ಬರ, ಕೃಷಿ ಪರಿಕರಗಳು ಸೇರಿದಂತೆ ಕಾರ್ಮಿಕರ ವೇತನವು ದುಬಾರಿಯಾಗಿದೆ. ಪರಿಸ್ಥಿತಿ ಹೀಗಿರುವಾಗ ರೈತರು ಹಾಗೂ ಬೆಳೆಗಾರರ ಉದ್ಧಾರವಾದರು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ಬೆಳೆಗಾರರ ಒಕ್ಕೂಟದ ಸಲಹೆಗಾರ ಚೆಪ್ಪುಡಿರ ಶರಿ ಸುಬ್ಬಯ್ಯ, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಹಾಸನದ ಜಿ.ಟಿ.ರಾಮಸ್ವಾಮಿ, ಕಾರ್ಯದರ್ಶಿ ರವಿಕುಮಾರ್‌, ಪಿ.ಗೋಪಾಲ್‌, ಮಂಜುನಾಥ್‌, ಲೋಕ ರಾಜೇ ಅರಸ್‌, ಹೊಸೂರು ಕುಮಾರ್‌, ಜಿಲ್ಲಾ ಘಟಕದ ಸಂಚಾಲಕ ಪುಚ್ಚಿಮಾಡ ಸುಭಾಷ್‌ ಸುಬ್ಬಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಅಮ್ಮತ್ತಿ ಹೋಬಳಿ ಸಂಚಾಲಕ ಮಂಡೇಪಂಡ ಪ್ರವೀಣ್‌, ಪೊನ್ನಂಪೇಟೆಯ ಹೋಬಳಿ ಸಂಚಾಲಕ ಆಲೇಮಾಡ ಮಂಜುನಾಥ್‌, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್‌ಉಪಸ್ಥಿತರಿದ್ದರು.

ನಿರ್ಣಯಗಳು
ಸಮಸ್ಯೆಗಳ ಪರಿಹಾರಕ್ಕೆ ಸಂಘಟಿತ ಹೋರಾಟ ನಡೆಸುವುದು, ಕಾಫಿ ಬೆಳೆಗಾರರು ಪಡೆದಿರುವ ಎಲ್ಲಾ ಸಾಲಮನ್ನಾ ಮಾಡಬೇಕು ಮತ್ತು ಹೊಸದಾಗಿ ಸಾಲ ನೀಡಬೇಕು, ಹತ್ತು ಲಕ್ಷದ ವರೆಗಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಮತ್ತು ಹತ್ತು ಲಕ್ಷ ರೂ. ಮೇಲಿನ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ ಒದಗಿಸಬೇಕು, ದೇಶದಲ್ಲಿ ಕಾಫಿ ಬಳಕೆ ಹೆಚ್ಚಿಸಲು ಕಾಫಿ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು, ಕಾಫಿ ಮಂಡಳಿಯಿಂದ ಈ ಹಿಂದೆ ನೀಡಲಾಗುತ್ತಿದ್ದ ಎಲ್ಲÉ ಸಬ್ಸಿಡಿಗಳನ್ನು ಮುಂದುವರಿಸಬೇಕು, ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕಾಫಿ ಮಂಡಳಿ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಜ್ಞಾನಿಗಳ ಸಹಯೋಗದೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದಿಸುವ ಸಂಶೋಧನೆಗೆ ಒತ್ತು ನೀಡಬೇಕು ಸೇರಿದಂತೆ ಇನ್ನೂ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next