Advertisement

ದ.ಕ.ದಲ್ಲಿ 19.86 ಲಕ್ಷ ಮೆಟ್ರಿಕ್‌ ಟನ್‌ ಲಭ್ಯ: ನಿರ್ಮಾಣ ಕ್ಷೇತ್ರಕ್ಕೆ ನಾನ್‌ ಸಿಆರ್‌ಝಡ್‌

12:47 AM Jul 26, 2022 | Team Udayavani |

ಮಂಗಳೂರು: ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಕ್ಷೇತ್ರಕ್ಕೆ ನಾನ್‌ಸಿಆರ್‌ಝಡ್‌ ವಲಯ ಹಾಗೂ ಅಣೆಕಟ್ಟಿನ ಹಿನ್ನೀರು ಪ್ರದೇಶದ ಮರಳು ಆಸರೆಯಾಗಿದ್ದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಾಹಿತಿಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19.86 ಲಕ್ಷ ಮೆಟ್ರಿಕ್‌ ಟನ್‌ ಮರಳು ಲಭ್ಯವಿದೆ.

Advertisement

ದ.ಕ.ದಲ್ಲಿ ನಾನ್‌ ಸಿಆರ್‌ಝಡ್‌ ವಲಯದ 17 ಬ್ಲಾಕ್‌ಗಳಲ್ಲಿ ಟೆಂಡರ್‌ ಮೂಲಕ ಮರಳುಗಾರಿಕೆಗೆ ಅವಕಾಶ ನೀಡಲಾಗಿದೆ. ಇದರಲ್ಲಿ ಒಟ್ಟು 4.72 ಲಕ್ಷ ಮೆ. ಟನ್‌ ಮರಳು ಲಭ್ಯವಿದೆ ಎಂದು ಅಂದಾಜಿಸಲಾಗಿದೆ. ಈ ವಲಯದಲ್ಲಿ ಮಳೆಗಾಲದಲ್ಲಿ ಮರಳುಗಾರಿಕೆಗೆ ನಿಷೇಧವಿದ್ದು ಆಕೋrಬರ್‌ನಲ್ಲಿ ಮರು ಚಾಲನೆಗೊಳ್ಳಲಿದೆ.

ಮಂಗಳೂರು ತಾಲೂಕು ಫಲ್ಗುಣಿ ನದಿ ಪಾತ್ರದ ಅದ್ಯಪಾಡಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಮತ್ತು ಬಂಟ್ವಾಳ ತಾಲ್ಲೂಕು ನೇತ್ರಾವತಿ ನದಿ ಪಾತ್ರದ ಶಂಭೂರು ಡ್ಯಾಂನ ಹಿನ್ನೀರಿನ ಪ್ರದೇಶದಲ್ಲಿ ತೆಗೆಯಲಾಗಿರುವ ಮರಳು ವಿತರಣೆ ನಡೆಯುತ್ತಿದೆ. ಅದ್ಯಪಾಡಿಯಲ್ಲಿ 3.44 ಲಕ್ಷ ಮೆ.ಟನ್‌ ಹಾಗೂ ಶಂಭೂರು ಹಿನ್ನೀರಿನ ಪ್ರದೇಶದಲ್ಲಿ 11.7 ಲಕ್ಷ ಮೆ.ಟನ್‌ ಲಭ್ಯತೆ ಅಂದಾಜಿಸಲಾಗಿದೆ.

ಮರಳನ್ನು ತೆಗೆಯಲು ಜಿಲ್ಲಾ ಮರಳು ಸಮಿತಿಯಿಂದ ಕರ್ನಾಟಕ ಸ್ಟೇಟ್‌ ಮಿನರಲ್‌ ಕಾರ್ಪೊರೇಶನ್‌ ಲಿಮಿಟೆಡ್‌ (ಕೆಎಸ್‌ಎಂಸಿಎಲ್‌) ಅವರಿಗೆ ಕಾರ್ಯಾದೇಶ ನೀಡಲಾಗಿದ್ದು ಮರಳುಮಿತ್ರ ಆ್ಯಪ್‌ ಮೂಲಕ ವಿತರಿಸಲಾಗುತ್ತಿದೆ. ನಾನ್‌ಸಿಆರ್‌ಝಡ್‌ ವಲಯದಲ್ಲಿ ಪ್ರಸ್ತುತ ಸಂಗ್ರಹದಿಂದ ಮರಳು ವಿತರಣೆಯಾಗುತ್ತಿದೆ.

ಸುಪ್ರೀಂ ಕೋರ್ಟ್‌ಗೆ ಅರ್ಜಿ
ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ಹಸಿರು ಪೀಠದಿಂದ ನಿರ್ಬಂಧ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಮರಳು ತೆಗೆಯುವಿಕೆ ಸ್ಥಗಿತಗೊಂಡಿದೆ. ಸಿಆರ್‌ಝಡ್‌ ವಲಯದಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಮರಳು ಗುತ್ತಿಗೆ ದಾರರು ಸಿದ್ಧತೆ ನಡೆಸಿದ್ದು ಮುಂದಿನ ವಾರ ಸಲ್ಲಿಕೆ ಯಾಗುವ ಸಾಧ್ಯತೆಗಳಿವೆ. ಪ್ರಸ್ತುತ ಹಸುರುಪೀಠ ಹೊರಡಿಸಿರುವ ಆದೇಶ ಉಡುಪಿ ಜಿಲ್ಲೆಗೆ ಮಾತ್ರ ಸಂಬಂಧಿಸಿದ್ದಾಗಿದೆ. ಆದರೆ ಇದನ್ನು ದ.ಕ. ಹಾಗೂ ಉತ್ತರ ಕನ್ನಡಕ್ಕೂ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಸಿಆರ್‌ಝಡ್‌ ವಲಯದ ಗುತ್ತಿಗೆ ದಾರರು ಸಿದ್ಧತೆ ನಡೆಸಿದ್ದು ಸದ್ಯವೇ ಸಲ್ಲಿಕೆಯಾಗಲಿದೆ ಎಂದು ಮರಳು ಕ್ರಿಯಾ ಸಮಿತಿ ಗೌರವಾಧ್ಯಕ್ಷ ಸುರೇಂದ್ರ ಕಂಬಳಿ ತಿಳಿಸಿದ್ದಾರೆ.

Advertisement

ದುಬಾರಿ ಮರಳು
ಸಿಆರ್‌ಝಡ್‌ ಮರಳಿಗೆ ಹೋಲಿಸಿದರೆ ನಾನ್‌ಸಿಆರ್‌ಝಡ್‌ ಮರಳು ದರ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಸೇರಿದಂತೆ ನಿರ್ಮಾಣ ಕಾಮಗಾರಿಗಳ ವೆಚ್ಚದಲ್ಲಿ ಹೆಚ್ಚಳವಾಗಲಿದೆ. ಈ ಹಿನ್ನಲೆಯಲ್ಲಿ ನಿರ್ಮಾಣ ಕಾಮಗಾರಿ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಜಿಲ್ಲಾ ಸಿವಿಲ್‌ ಕಂಟ್ರಾಕ್ಟರ್ ಅಸೋಸಿಯೇಶನ್‌ನ ಮಹಾಬಲ ಕೊಟ್ಟಾರಿ. ಈ ಹಿಂದೆ ಸಿಆರ್‌ಝಡ್‌ ಮರಳು ಒಂದು ಲೋಡ್‌ 6ರಿಂದ 7 ಸಾವಿರಕ್ಕೆ ಲಭ್ಯವಾಗುತ್ತಿದ್ದರೆ ಇದೀಗ ನಾನ್‌ ಸಿಆರ್‌ಝಡ್‌ ಮರಳು ದರ ಒಂದು ಲೋಡ್‌ಗೆ 9 ಸಾವಿರಕ್ಕೂ ಅಧಿಕವಾಗಿದೆ ಗುತ್ತಿಗೆದಾರರ ವಲಯ ಹೇಳುತ್ತಿದೆ.

ಪ್ರಸ್ತುತ ಸಿಆರ್‌ಝಡ್‌ ವಲಯದಲ್ಲಿ ಮರಳು ಗಾರಿಕೆಗೆ ನಿಷೇಧವಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಜಿಲ್ಲೆಯಲ್ಲಿ ನಿರ್ಮಾಣ ಕ್ಷೇತ್ರಕ್ಕೆ ನಾನ್‌ಸಿಆರ್‌ಝಡ್‌ ವಲಯ ಹಾಗೂ ಡ್ಯಾಂಗಳಿಂದ ಮರಳು ಪೂರೈಕೆ ಆಗಲಿದೆ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next