“19.20.21′ ಸಿನಿಮಾದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸಿನಿ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಿನಿಮಾ ಇದೇ ಮಾರ್ಚ್ 3ಕ್ಕೆ ತೆರೆಗೆ ಬರುತ್ತಿದೆ. ಇನ್ನು “19.20.21′ ಸಿನಿಮಾದ ಟೈಟಲ್, ಕಥಾಹಂದರ, ಅದರ ಹಿನ್ನೆಲೆ ಬಗ್ಗೆ ಮಾತನಾಡಿರುವ ನಿರ್ದೇಶಕ ಮಂಸೋರೆ ತೆರೆಹಿಂದಿನ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ನಮ್ಮ ದೇಶದ ಸಂವಿಧಾನದಲ್ಲಿ ಬರುವ ಆರ್ಟಿಕಲ್ 19, 20 ಮತ್ತು 21 ತುಂಬ ಮುಖ್ಯವಾದದ್ದು. ಅದನ್ನು ಸಂವಿಧಾನದ ಹೃದಯ ಭಾಗ ಎಂದೂ ಕರೆಯುತ್ತಾರೆ. ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಅದು ಹೇಳುತ್ತದೆ. ನಮ್ಮ ಸಿನಿಮಾದ ಕಥೆ ಕೂಡ ಅದನ್ನೇ ಹೇಳುತ್ತದೆ. ಅದಕ್ಕೆ ನಮ್ಮ ಸಿನಿಮಾಕ್ಕೆ “19.20.21′ ಅಂಥ ಟೈಟಲ್ ಇಟ್ಟಿದ್ದೇವೆ. ಸಂವಿಧಾನದ ಆಶಯಗಳನ್ನು ಸಿನಿಮಾದಲ್ಲೂ ಹೇಳಿದ್ದೇವೆ’ ಇದು ನಿರ್ದೇಶಕ ಮಂಸೋರೆ ಮಾತು.
“ನನ್ನ ಹಿಂದಿನ ಮೂರು ಸಿನಿಮಾಗಳಿಗಿಂತ ಸಂಪೂರ್ಣ ವಿಭಿನ್ನ ಕಥಾಹಂದರ ಈ ಸಿನಿಮಾದಲ್ಲಿದೆ. ಇದು ಒಂದು ನೈಜ ಘಟನೆ ಆಧಾರಿತ ಸಿನಿಮಾ. ನನ್ನ ಹಿಂದಿನ ಸಿನಿಮಾಗಳಲ್ಲಿ ಒಂದು ಸರಳ ನಿರೂಪಣೆ, ಮೆಲೋ ಡ್ರಾಮಾ ಇರುತ್ತಿತ್ತು. ಆದರೆ ಈ ಸಿನಿಮಾ ಅದೆಲ್ಲದರಿಂದ ಹೊರಬಂದು, ಸಿದ್ಧಸೂತ್ರಗಳನ್ನು ಬದಿಗಿಟ್ಟು ಮಾಡಿರುವ ಸಿನಿಮಾ. “19.20.21′ ಒಂದು ಸಮುದಾಯವನ್ನು ಜಾಗೃತಗೊಳಿಸುವ, ಸುದೀರ್ಘ ಹೋರಾಟದ ಕಥಾಹಂದರದ ಸಿನಿಮಾ. ಇದು ಕೇವಲ ಸಿನಿಮ್ಯಾಟಿಕ್ ಆಗಿರದೇ ನೋಡುವ ಪ್ರತಿಯೊಬ್ಬರಿಗೂ ಕಣ್ಮುಂದೆ ಘಟಿಸುವಂತೆ ಅನುಭವ ಕೊಡುತ್ತದೆ. ವರ್ಲ್ಡ್ ಸಿನಿಮಾಗಳಲ್ಲಿ ಇರುವಂಥ ಸಬ್ಜೆಕ್ಟ್, ನಿರೂಪಣೆ ಈ ಸಿನಿಮಾದಲ್ಲಿದೆ. ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದಿದ್ದು ಕಡಿಮೆ. ಇಂಥ ಸಿನಿಮಾಗಳು ಗೆಲ್ಲಬೇಕು. ಇಂಥ ಸಿನಿಮಾಗಳು ಗೆದ್ದರೆ ಕನ್ನಡ ಪ್ರೇಕ್ಷಕರ ದೃಷ್ಟಿಕೋನ, ಆಯಾಮ ಮತ್ತೂಂದು ರೀತಿಯಲ್ಲಿ ಬದಲಾಗುತ್ತದೆ’ ಎಂಬುದು ನಿರ್ದೇಶಕ ಮಂಸೋರೆ ವಿಶ್ವಾಸದ ಮಾತು.
“ಇದೊಂದು ನೈಜ ಘಟನೆ ಆಧಾರಿತ ಸಿನಿಮಾವಾಗಿದ್ದರಿಂದ, ಇದನ್ನು ತೆರೆಮೇಲೆ ತರುವುದು ನಮ್ಮ ತಂಡಕ್ಕೂ ದೊಡ್ಡ ಸವಾಲಾಗಿತ್ತು. ಸಿದ್ಧ ಸೂತ್ರಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡುವುದು ಸುಲಭ. ಇಡೀ ಚಿತ್ರತಂಡಕ್ಕೆ ಒಂದು ಕಂಫರ್ಟ್ ಜೋನ್ ಇರುತ್ತದೆ. ಆದರೆ ಅದನ್ನು ಮುರಿದು ಈ ಥರದ ಹೊಸ ಶೈಲಿಯ ಸಿನಿಮಾಗಳನ್ನು ಮಾಡುವುದು ನಿಜಕ್ಕೂ ರಿಸ್ಕ್. ಅಂಥ ರಿಸ್ಕ್ ನಾವು ತೆಗೆದುಕೊಂಡಿದ್ದೇವೆ. ಒಟ್ಟಿನಲ್ಲಿ ಕನ್ನಡದಲ್ಲಿ ಒಂದು ವಿಭಿನ್ನ ಪ್ರಯೋಗದ ಸಿನಿಮಾ ಮಾಡಿದ್ದೇವೆ ಎಂಬ ತೃಪ್ತಿಯಿದೆ. ಈಗಾಗಲೇ ಆಡಿಯನ್ಸ್ ಮತ್ತು ಚಿತ್ರರಂಗದ ಕಡೆಯಿಂದಲೂ “19.20.21′ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾದ ಮೇಲೆ ನಮಗೂ ಸಾಕಷ್ಟು ಭರವಸೆಯಿದೆ’ ಎನ್ನುತ್ತಾರೆ ಮಂಸೋರೆ.
ದೇವರಾಜ್ ಆರ್. ನಿರ್ಮಾಣ ಮತ್ತು ಸತ್ಯ ಹೆಗಡೆ ಸಹ ನಿರ್ಮಾಣದಲ್ಲಿ ಮೂಡಿಬಂದಿರುವ “19.20.21′ ಸಿನಿಮಾದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ. ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ. ಡಿ ಪಲ್ಲವಿ, ವಿಶ್ವಕರ್ಣ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.