Advertisement

ಅಡಿಕೆ ಹಳದಿ ರೋಗಕ್ಕೆ 18 ಕೋ.ರೂ. ಪ್ಯಾಕೇಜ್‌

02:39 AM Nov 02, 2021 | Team Udayavani |

ಮಂಗಳೂರು: ಸುಳ್ಯ ಸೇರಿದಂತೆ ಕರಾವಳಿಯ 3 ಸಾವಿರ ಎಕರೆ ಪ್ರದೇಶದ ಅಡಿಕೆ ತೋಟದಲ್ಲಿ ಹಳದಿ ಎಲೆ ರೋಗ ಬಾಧೆ ಇದ್ದು, 18 ಕೋ.ರೂ.ಗಳ ಪ್ಯಾಕೇಜ್‌ ನೀಡುವಂತೆ ರಾಜ್ಯ ಸರಕಾರಕ್ಕೆ ತೋಟಗಾರಿಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಶೀಘ್ರ ಮಂಜೂರಾಗುವ ನಿರೀಕ್ಷೆಯಿದೆ ಎಂದು ಸಚಿವ ಎಸ್‌. ಅಂಗಾರ ತಿಳಿಸಿದರು.

Advertisement

ನಗರದ ನೆಹರೂ ಮೈದಾನದಲ್ಲಿ ಸೋಮವಾರ ಜರಗಿದ ದ.ಕ. ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸಂದೇಶ ನೀಡಿದರು.

ಜಿಲ್ಲೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಬಳಿಕ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿವೆ. ನ. 2ರಿಂದ 1-5ನೇ ತರಗತಿಗೆ ಬಿಸಿಯೂಟ ಪ್ರಾರಂಭವಾಗಲಿದೆ. ಈಗಾಗಲೇ 3.20 ಲಕ್ಷ ವಿದ್ಯಾರ್ಥಿಗಳು ಅತ್ಯಂತ ಸಂತಸದಿಂದ ತರಗತಿಗಳಿಗೆ ಬರುತ್ತಿದ್ದು ಹಾಜರಾತಿ ಉತ್ತಮವಾಗಿದೆ. 27 ಶಾಲೆಗಳ ಭೌತಿಕ ಸೌಲಭ್ಯಗಳಿಗೆ 2.70 ಕೋಟಿ ರೂ.ಗಳ ಅನುದಾನ ಕಾದಿರಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಬಂಟ್ವಾಳದ ಮೊಂಟೆಪದವು, ಪುತ್ತೂರಿನ ಕೆಯ್ಯೂರಿನಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆಗಳಿಗೆ ಮೂಸೌಲಭ್ಯ ಅಭಿವೃದ್ಧಿಗೆ ತಲಾ 2 ಕೋ.ರೂ.ಗಳಂತೆ ಒಟ್ಟು 4 ಕೋ.ರೂ. ಅನುದಾನ ಮಂಜೂರಾಗಿದೆ. ವಿಟ್ಲ, ದಡ್ಡಲಕಾಡು ಶಾಲೆಗಳನ್ನು ಪ್ರೌಢ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020ರನ್ವಯ 70 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯಲು ಕೇಂದ್ರ ಸರಕಾರ ಅನುಮೋದಿಸಿದೆ ಎಂದು ವಿವರಿಸಿದರು.

ಬೀಚ್‌ ಅಭಿವೃದ್ಧಿಗೆ ಆದ್ಯತೆ
ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ, ತಲಪಾಡಿ, ಸಸಿಹಿತ್ಲು, ಸುರತ್ಕಲ್‌, ಉಳ್ಳಾಲ ಹಾಗೂ ಮುಕ್ಕ ಕಡಲ ತೀರಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಧರ್ಮಸ್ಥಳ, ಕಟೀಲು, ಪೊಳಲಿ, ಮಂಗಳಾದೇವಿ, ಕದ್ರಿ, ಉರ್ವ, ಸೌತಡ್ಕ, ಮರೋಳಿ ದೇವಸ್ಥಾನ ಸೇರಿದಂತೆ ಇತರ ಪ್ರವಾಸಿ ತಾಣಗಳಲ್ಲಿ ಯಾತ್ರಿ ನಿವಾಸ, ರಸ್ತೆ, ಶೌಚಾಲಯ ಸಹಿತ 23.6 ಕೋ.ರೂ. ವೆಚ್ಚದ ವಿವಿಧ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.ವಿವಿಧ ಕ್ಷೇತ್ರಗಳ 40 ಸಾಧಕರು ಹಾಗೂ 17 ಸಂಘ-ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಇದನ್ನೂ ಓದಿ:ಟಿ20 ವಿಶ್ವಕಪ್‌ : ಇಂಗ್ಲೆಂಡ್‌ ಸೆಮಿಫೈನಲ್‌ ಸಂಭ್ರಮ

ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್‌, ಯು.ಟಿ. ಖಾದರ್‌, ಡಾ| ವೈ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌, ಕೊಂಕಣಿ ಅಕಾಡೆಮಿ ಅಧ್ಯಕ್ಷ ಡಾ| ಜಗದೀಶ್‌ ಪೈ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಕೆ. ರವೀಂದ್ರ ಶೆಟ್ಟಿ, ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ., ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌, ಜಿ.ಪಂ. ಸಿಇಒ ಡಾ| ಕುಮಾರ್‌, ಎಸ್‌ಪಿ ಹೃಷಿಕೇಶ್‌ ಸೋನಾವಣೆ, ಜಿಲ್ಲಾ ಕಸಪಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ್‌ ಕಲ್ಕೂರ ಉಪಸ್ಥಿತರಿದ್ದರು.

ಕೊರೊನಾ ಸಂಭಾವ್ಯ ಅಲೆ ಎದುರಿಸಲು ಸಿದ್ಧ
ಕೊರೊನಾ ಸಂಭಾವ್ಯ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಜಿಲ್ಲೆ ಸಿದ್ಧವಾಗಿದೆ. ಈಗಾಗಲೇ 12 ವೈದ್ಯಕೀಯ ಆಮ್ಲಜನಕ ಉತ್ಪಾದನೆ ಘಟಕಗಳು ಕಾರ್ಯಾರಂಭಿಸಿವೆ. ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಬೆಡ್‌ಗಳಿಗೆ ಐಸಿಯು ವೆಂಟಿಲೇಟರ್‌ ಸೌಲಭ್ಯ ಕಲ್ಪಿಸಲಾಗಿದೆ. ಶೇ. 89ರಷ್ಟು ಮಂದಿಗೆ ಮೊದಲನೇ ಡೋಸ್‌ ಹಾಗೂ ಶೇ. 53 ಮಂದಿಗೆ ಎರಡನೇ ಡೋಸ್‌ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದು ಸಚಿವ ಅಂಗಾರ ತಿಳಿಸಿದರು.

ತಲೆಕೆಳಗಾದ ರಾಷ್ಟ್ರಧ್ವಜ!
ಧ್ವಜಾರೋಹಣ ಸಂದರ್ಭ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿದ ಘಟನೆ ಸಂಭವಿಸಿತು. ತತ್‌ಕ್ಷಣವೇ ಅದು ಅಧಿಕಾರಿಗಳ ಗಮನಕ್ಕೆ ಬಂದಿತು. ಅಷ್ಟರಲ್ಲಿ ಧ್ವಜವಂದನೆ, ರಾಷ್ಟ್ರಗೀತೆ ಇತ್ಯಾದಿ ವಿಧಿವಿಧಾನ ಆರಂಭಗೊಂಡಿದ್ದರಿಂದ ಮುಗಿದ ತತ್‌ಕ್ಷಣವೇ ಧ್ವಜವನ್ನು ಕೆಳಗಿಳಿಸಿ ಸರಿಪಡಿಸಿ ಹಾರಿಸಿದರು!

Advertisement

Udayavani is now on Telegram. Click here to join our channel and stay updated with the latest news.

Next