ಬೆಂಗಳೂರು: 2018-19ನೇ ಸಾಲಿನಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ತೆರಿಗೆ ಇಲಾಖೆ (ಕರ್ನಾಟಕ ಮತ್ತು ಗೋವಾ ವಲಯ)ಯು ವಿವಿಧೆಡೆ ನಡೆಸಿದ ಶೋಧ ಕಾರ್ಯದಲ್ಲಿ ಸುಮಾರು 189 ಕೋಟಿ ರೂ. ಜಪ್ತಿ ಮಾಡಿದ್ದು, ಅಲ್ಲಲ್ಲಿ ಬಚ್ಚಿಡಲಾಗಿದ್ದ 7,563 ಕೋಟಿ ನಗದು ಪತ್ತೆಹಚ್ಚಿದೆ. ಇದರಲ್ಲಿ ಪ್ರಮುಖ ರಾಜಕೀಯ ನಾಯಕರಿಗೆ ಸೇರಿದ ಹಣವೂ ಸೇರಿದೆ.
ಕರ್ನಾಟಕ ಮತ್ತು ಗೋವಾ ವಲಯದಲ್ಲಿ ಲೋಕಸಭಾ ಚುನಾವಣೆ ವೇಳೆ ಅತ್ಯಧಿಕ ಮೊತ್ತದ ಬೇನಾಮಿ (ಲೆಕ್ಕಕ್ಕೆ ಸಿಗದ) ಹಣ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 35 ಕೋಟಿ ರೂ. ಜಪ್ತಿ ಮಾಡಲಾಗಿದೆ. ಒಟ್ಟಾರೆ 2018-19ರಲ್ಲಿ 158 ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ 189 ಕೋಟಿ ರೂ. ಜಪ್ತಿ ಮಾಡಲಾಗಿದೆ. ಅಲ್ಲದೆ, ಬಚ್ಚಿಡಲಾಗಿದ್ದ 7,563 ಕೋಟಿ ನಗದನ್ನು ಕೂಡ ಪತ್ತೆ ಮಾಡಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಧಾನ ಮುಖ್ಯ ಆಯುಕ್ತ (ಕರ್ನಾಟಕ-ಗೋವಾ ವಲಯ) ಬಿ.ಆರ್. ಬಾಲಕೃಷ್ಣನ್ ತಿಳಿಸಿದರು.
ನಗರದ ಇನ್‌ಫ್ಯಾಂಟ್ರಿ ರಸ್ತೆಯ ಪ್ರಸ್ತಾಪಿತ ಹೊಸ ಆಯಕಾರ್ ಭವನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ 159ನೇ ಆದಾಯ ತೆರಿಗೆ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜತೆಗೆ ಇದೇ ಅವಧಿಯಲ್ಲಿ ತೆರಿಗೆ ವಂಚಕರ ವಿರುದ್ಧದ 355 ಪ್ರಕರಣಗಳು ದಾಖಲಾಗಿದ್ದು, ಅದರ ಮೊತ್ತ 4,830 ಕೋಟಿ ಆಗುತ್ತದೆ. ಇದಲ್ಲದೆ, ಬೇನಾಮಿ ವಹಿವಾಟುಗಳ (ನಿಷೇಧ) ತಿದ್ದುಪಡಿ ಕಾಯ್ದೆ-2016ರಡಿ 87 ಬೇನಾಮಿ ಆಸ್ತಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಆಸ್ತಿಗಳ ಮೊತ್ತ 573 ಕೋಟಿ ಆಗಿದೆ. ಈ ಸಂಬಂಧ ದಾಖಲಾದ ಪ್ರಕರಣಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರೂ ಸೇರಿದ್ದಾರೆ. ಆದರೆ, ಪಕ್ಷವಾರು ಮಾಹಿತಿ ನೀಡುವುದು ಹಾಗೂ ಆ ನಾಯಕರ ಹೆಸರು ಬಹಿರಂಗಪಡಿಸಲಾಗದು ಎಂದು ತಿಳಿಸಿದರು.
2008-09ರಲ್ಲಿ ತೆರಿಗೆ ಸಂಗ್ರಹ ಮೊತ್ತ ಕೇವಲ 30 ಸಾವಿರ ಕೋಟಿ ರೂ.ನಷ್ಟಿತ್ತು. ಕಳೆದ ವರ್ಷ ನಮ್ಮ ವಲಯದಿಂದ 1.21 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹವಾಗಿತ್ತು. ಪ್ರಸಕ್ತ ವರ್ಷ 1.51 ಲಕ್ಷ ಕೋಟಿ ರೂ. ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಇನ್ನು 2013-14ರಲ್ಲಿ 12.73 ಲಕ್ಷದಷ್ಟಿದ್ದ ಐಟಿ ರಿಟರ್ನ್ಸ್ ಅರ್ಜಿಗಳ ಸಂಖ್ಯೆ 2018-19ರಲ್ಲಿ 41.26 ಲಕ್ಷಕ್ಕೆ ಏರಿಕೆಯಾಗಿದೆ ಎಂದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014ರ ಲೋಕಸಭೆ ಚುನಾವಣೆ ವೇಳೆ 3 ಕೋಟಿ ರೂ. ಜಪ್ತಿ ಮಾಡಲಾಗಿತ್ತು. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಶಪಡಿಸಿಕೊಂಡ ಮೊತ್ತ ಸುಮಾರು 35 ಕೋಟಿ ರೂ. ಆಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.