Advertisement

ದ.ಕ.: 186 ಮಂದಿಗೆ ಪಾಸಿಟಿವ್‌, 3 ಸಾವು: ಇಂದು ಸಂಪೂರ್ಣ ಲಾಕ್‌ಡೌನ್‌

01:36 AM Jul 12, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 186 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.

Advertisement

ಜಿಲ್ಲೆಯಲ್ಲಿ ಇಂದು ಈ ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ. (ಇಬ್ಬರ ಸಾವು ಶುಕ್ರವಾರ ಸಂಭವಿಸಿದ್ದರೂ ಕೋವಿಡ್‌ ಪರೀಕ್ಷೆಯ ವರದಿ ಶನಿವಾರ ಲಭಿಸಿದೆ.)

ಇದೇ ವೇಳೆ 29 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಲಿಂಪೋಬ್ಲಾಸ್ಟಿಕ್‌ (ರಕ್ತ ಸಂಬಂಧಿತ ಕಾಯಿಲೆ) ಕಾಯಿಲೆಯಿಂದ ಬಳಲುತ್ತಿದ್ದ 33ರ ಯುವಕ, ನ್ಯುಮೋನಿಯಾದಿಂದ ಬಳಲುತ್ತಿದ್ದ 67ರ ಮಹಿಳೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ 78ರ ವೃದ್ಧ ಮೃತಪಟ್ಟವರು.

ಶನಿವಾರ ವರದಿಯಾಗಿರುವ 186 ಪ್ರಕರಣಗಳಲ್ಲಿ 37 ಪ್ರಾಥಮಿಕ ಸಂಪರ್ಕ, 64 ಮಂದಿ ಇನ್‌ಫ್ಲೂಯೆನ್ಷಾ ಲೈಕ್‌ ಇಲ್‌ನೆಸ್‌ (ಐಎಲ್‌ಐ), 17 ಮಂದಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ (ಸಾರಿ) ಪ್ರಕರಣಗಳಾಗಿವೆ. ಇಬ್ಬರು ಬೆಂಗಳೂರಿನಿಂದ ಬಂದವರು, 10 ಮಂದಿ ಕತಾರ್‌ ಹಾಗೂ ದುಬಾೖಯಿಂದ ಬಂದವರು.

Advertisement

ಶಸ್ತ್ರಚಿಕಿತ್ಸೆ ಪೂರ್ವ ಪರೀಕ್ಷೆಯಲ್ಲಿ 7 ಮಂದಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. 32 ಮಂದಿ ಸೋಂಕಿತರ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ. ಪ್ರಸವ ಪೂರ್ವ ಪರೀಕ್ಷೆಯಲ್ಲಿ ಇಬ್ಬರಿಗೆ ಹಾಗೂ ರ್‍ಯಾಂಡಮ್‌ ಸ್ಯಾಂಪಲ್‌ ಪರೀಕ್ಷೆಯಲ್ಲಿ 13 ಮಂದಿಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ.

ದ.ಕ.ದಲ್ಲಿ ಈವರೆಗೆ 2,034 ಮಂದಿಗೆ ಕೋವಿಡ್ 19 ಸೋಂಕು ಬಾಧಿಸಿದ್ದು, 782 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 1,211 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುರತ್ಕಲ್‌ ಪರಿಸರ: 6 ಪ್ರಕರಣ ದೃಢ
ಮುಕ್ಕ, ಕಾಟಿಪಳ್ಳ, ಸೂರಿಂಜೆ ಯಲ್ಲಿ ತಲಾ 1, ಕಾವೂರು, ತಣ್ಣೀರುಬಾವಿ,ಬೆಂಗ್ರೆ, ಎಂಆರ್‌ಪಿಎಲ್‌ ಸ್ಟಾಫ್‌ ಕಾಲೇಜಿನಲ್ಲಿ ಒಬ್ಬೊಬ್ಬರಿಗೆ ಸೋಂಕು ತಗಲಿದೆ.

ಮಾರಿಪಳ್ಳದ ವೃದ್ಧ ಸಾವು
ತಾಲೂಕಿನಲ್ಲಿ ಕೋವಿಡ್ 19 ಸೋಂಕಿನ ಪ್ರಕರಣಗಳ ಜತೆಗೆ ಸಾವಿನ ಪ್ರಕರಣಗಳು ಕೂಡ ಹೆಚ್ಚುತ್ತಿದ್ದು, ಪುದು ಗ್ರಾಮದ ಮಾರಿಪಳ್ಳ ನಿವಾಸಿ 85ರ ವೃದ್ಧ ಶನಿವಾರ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ವ್ಯತ್ಯಯ ಕಂಡುಬಂದ ಕಾರಣ ಕೆಲವು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ದೃಢವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಅಂತ್ಯಕ್ರಿಯೆಯನ್ನು ಪುದು ಗ್ರಾಮದ ದಫನ ಭೂಮಿಯಲ್ಲಿ ನಡೆಸಲಾಗಿದ್ದು, ಸ್ಥಳಕ್ಕೆ ಶಾಸಕ ಯು.ಟಿ. ಖಾದರ್‌ ಸೇರಿದಂತೆ ಪ್ರಮುಖರು ಭೇಟಿ ನೀಡಿದರು.

ಬಂಟ್ವಾಳದಲ್ಲಿ 12 ಪ್ರಕರಣ
ಬಂಟ್ವಾಳ ತಾ|ನಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದೆ. ವಿಟ್ಲದ ಒಕ್ಕೆತ್ತೂರು, ಕಲ್ಲಡ್ಕ, ಅರ್ಕುಳ, ನಾವೂರು ಪೂಪಾಡಿಕಟ್ಟೆ, ಪುದು ಗ್ರಾಮದ ಪುರುಷರು, ಬಂಟ್ವಾಳ ಬಿ.ಕಸ್ಬಾದ ಇಬ್ಬರು ಪುರುಷರು, ಬಂಟ್ವಾಳ ಬಿ.ಮೂಡ, ಸಜಿಪ ನಗ್ರಿ, ಪುದು, ಕಂಬಳಬೆಟ್ಟು ಮತ್ತು ಸಾಲೆತ್ತೂರಿನ ಮಹಿಳೆಗೆ ಸೋಂಕು ದೃಢಪಟ್ಟಿದೆ. ಬಾಧಿತರಲ್ಲಿ ಇಬ್ಬರು 70 ವರ್ಷದ ವೃದ್ಧೆಯರು.

ಉಳ್ಳಾಲ: 13 ಪ್ರಕರಣ
ಗರಸಭಾ ವ್ಯಾಪ್ತಿಯಲ್ಲಿ ಶನಿವಾರ 4 ಪ್ರಕರಣ ಸೇರಿದಂತೆ ಉಳ್ಳಾಲ ವ್ಯಾಪ್ತಿಯ ಗ್ರಾಮಗಳಲ್ಲಿ 13 ಪ್ರಕರಣಗಳು ದೃಢವಾಗಿವೆ. ನಗರಸಭಾ ವ್ಯಾಪ್ತಿಯ ಧರ್ಮನಗರ, ಸುಂದರಿಬಾಗ್‌, ಮಾಸ್ತಿಕಟ್ಟೆಯ ಮಹಿಳೆಯರಿಗೆ, ತೊಕ್ಕೊಟ್ಟು ಚೆಂಬುಗುಡ್ಡೆ ಮತ್ತು ಕೋಟೆಕಾರಿನ ಯುವಕರಿಗೆ, ಬೋಳಿಯಾರಿನ ಮಹಿಳೆ, ಹರೇಕಳ ಪಂಜಿಮಡಿ, ಸೋಮೇಶ್ವರ, ಕಿನ್ಯದ ವ್ಯಕ್ತಿ, ಬಾಳೆಪುಣಿ ಮುದುಂಗಾರುಕಟ್ಟೆ, ಬೆಳ್ಮ ರೆಂಜಾಡಿ, ತಲಪಾಡಿ ಪೂಮಣ್ಣು ಮತ್ತು ಕುತ್ತಾರು ದೇರಳಕಟ್ಟೆ ಯುವತಿಯಲ್ಲಿ ಸೋಂಕು ದೃಢವಾಗಿದೆ.

ಪುತ್ತೂರು: ಐವರಿಗೆ ಪಾಸಿಟಿವ್‌
ನಗರ ಪೊಲೀಸ್‌ ಠಾಣೆಯ ವಸತಿಗೃಹದಲ್ಲಿ ವಾಸವಾಗಿರುವ ನಗರ ಠಾಣೆಯ ಕಾನ್‌ಸ್ಟೆಬಲ್‌ ಮತ್ತು ಅವರ ತಾಯಿಯಲ್ಲಿ (48) ಹಾಗೂ ಕೆದಂಬಾಡಿ ಗ್ರಾಮದ ನಿಡ್ಯಾಲದ 56ರ ವ್ಯಕ್ತಿಯಲ್ಲಿ ಶನಿವಾರ ಕೋವಿಡ್ 19 ದೃಢಪಟ್ಟಿದೆ. ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ 28 ವರ್ಷದ ಆರ್ಯಾಪು ಗ್ರಾಮದ ಕಲ್ಲರ್ಪೆ ನಿವಾಸಿ ಬಾಣಂತಿಯಲ್ಲಿ, ಬನ್ನೂರು ಗ್ರಾಮದ ನೀರ್ಪಾಜೆ ನಿವಾಸಿ 48ರ ವ್ಯಕ್ತಿಯಲ್ಲಿ ಸೋಂಕು ದೃಢವಾಗಿದೆ. ಅವರು ಈಗಾಗಲೇ ಜ್ವರದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದಾರೆ.

ಸುಳ್ಯ: ವೈದ್ಯನ ಸಹಿತ ನಾಲ್ವರಿಗೆ ಸೋಂಕು
ನಗರದ ಖಾಸಗಿ ಆಸ್ಪತ್ರೆಯ ವೈದ್ಯ, ಪಿಜಿ ವಿದ್ಯಾರ್ಥಿ, ಡಯಾಲಿಸಿಸ್‌ಗೆ ಬಂದಿದ್ದ ರೋಗಿ ಮತ್ತು ಓರ್ವ ಯುವಕ ಸೇರಿದಂತೆ ನಾಲ್ವರಿಗೆ ಶನಿವಾರ ಕೋವಿಡ್ 19 ಪಾಸಿಟಿವ್‌ ದೃಢವಾಗಿದ್ದು, ಹೊರರೋಗಿ ವಿಭಾಗವನ್ನು ಎರಡು ದಿನಗಳ ಮಟ್ಟಿಗೆ ಮುಚ್ಚಲಾಗಿದೆ.

ಬೆಳ್ತಂಗಡಿ: ಆಸ್ಪತ್ರೆ ಸಿಬಂದಿಗೇ ಕೋವಿಡ್ 19 ಬಾಧೆ
ಕೋವಿಡ್‌ ಆಸ್ಪತ್ರೆಯಾಗಿರುವ ಇಲ್ಲಿನ ತಾಲೂಕು ಸರಕಾರಿ ಆಸ್ಪತ್ರೆಯ ಇಬ್ಬರು ಸಿಬಂದಿಯನ್ನೇ ಕೋವಿಡ್‌ ಬಾಧಿಸಿದೆ. 36 ವರ್ಷದ ಶುಶ್ರೂಷಕಿ ಮತ್ತು 38ರ ಪ್ರಯೋಗ ತಂತ್ರಜ್ಞೆಗೆ ಶನಿವಾರ ಸೋಂಕು ದೃಢವಾಗಿದೆ. ಇನ್ನೊಂದೆಡೆ ಕಲ್ಮಂಜ ಗ್ರಾಮದ ಭೂತಲಮಾರಿನ 39 ವರ್ಷದ ವ್ಯಕ್ತಿಗೂ ಶನಿವಾರ ಕೋವಿಡ್ 19 ದೃಢಪಟ್ಟಿದೆ.

ಇಂದು ಸಂಪೂರ್ಣ ಲಾಕ್‌ಡೌನ್‌
ಮಂಗಳೂರು/ಉಡುಪಿ:
ರಾಜ್ಯದಲ್ಲಿ ಕೋವಿಡ್ 19 ಸೋಂಕು ಮಟ್ಟ ಹಾಕುವ ನಿಟ್ಟಿನಲ್ಲಿ ರವಿವಾರದ ಲಾಕ್‌ಡೌನ್‌ ಈ ವಾರವೂ ಮುಂದುವರಿಯಲಿದೆ. ರಾತ್ರಿ ಲಾಕ್‌ಡೌನ್‌ (ಕರ್ಫ್ಯೂ) ಈಗಾಗಲೇ ಜಾರಿಯಲ್ಲಿದ್ದು, ರವಿವಾರ ಅದಕ್ಕೆ ಸೇರ್ಪಡೆಯಾಗಿದೆ.  ಹೀಗಾಗಿ ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5 ಗಂಟೆ ತನಕ ಲಾಕ್‌ಡೌನ್‌ ಇರಲಿದೆ. ಶನಿವಾರ ರಾತ್ರಿಯಿಂದಲೇ ವಾಹನಗಳ ಸಂಚಾರ ವಿರಳವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next