ವಾಷಿಂಗ್ಟನ್: ಜಾಗತಿಕವಾಗಿ ಕೋವಿಡ್ 19 ವೈರಸ್ ಸೋಂಕು ಹಬ್ಬಿಸಿದ ಚೀನಾದ ವಿರುದ್ಧ ತನಿಖೆ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿರುವ ಬೆನ್ನಲ್ಲೇ ಚೀನಾ ಮಾರಣಾಂತಿಕ ಕೋವಿಡ್ 19 ವೈರಸ್ ಅನ್ನು ಹರಡುವ ಮೂಲಕ ಜಗತ್ತಿನ 184 ದೇಶಗಳು ನರಕ ಅನುಭವಿಸುವಂತಾಗಿದೆ ಎಂದು ಮತ್ತೆ ಆರೋಪಿಸಿದ್ದಾರೆ.
ಕೋವಿಡ್ 19 ವೈರಸ್ ಗೆ ಚೀನಾವೇ ತವರು ಎಂದು ಆರೋಪಿಸುವ ಅಮೆರಿಕದ ಹಲವು ಸಂಸದರು, ಬೀಜಿಂಗ್ ಮೇಲೆ ಹೆಚ್ಚು ಅವಲಂಬನೆಯಾಗುವುದು ಬೇಡ ಎಂಬ ಬೇಡಿಕೆಯನ್ನು ಇಟ್ಟಿರುವುದಾಗಿ ವರದಿ ತಿಳಿಸಿದೆ.
ಚೀನಾ ಜಗತ್ತಿನಾದ್ಯಂತ ಕಣ್ಣಿಗೆ ಕಾಣದ ಸೂಕ್ಷ್ಮ ಶತ್ರುವನ್ನು ಹರಡಿರುವುದಾಗಿ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ಆರೋಪಿಸಿದ್ದು, ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದರು. ಚೀನಾದಿಂದಾಗಿ ಇಂದು ಜಗತ್ತಿನ 184 ದೇಶಗಳು ನರಕ ಅನುಭವಿಸುತ್ತಿದೆ.
ವೈರಸ್ ಹರಡುವುದನ್ನು ತಡೆಗಟ್ಟುವ ಬದಲು ಅದು ಉದ್ದೇಶಪೂರ್ವಕವಾಗಿ ಹರಡಲಿ ಎಂದು ಯಾವ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಬೇರೆ ದೇಶಗಳಿಗೂ ಎಚ್ಚರಿಕೆ ನೀಡಿಲ್ಲ. ನಾವು ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತೇವೆ. ಚೀನಾದಿಂದ ಜರ್ಮನಿ 140 ಬಿಲಿಯನ್ ಡಾಲರ್ ಮೊತ್ತದ ಪರಿಹಾರ ಕೇಳಿದೆ. ಆದರೆ ಅಮೆರಿಕ ಅದಕ್ಕಿಂತಲೂ ದೊಡ್ಡ ಮೊತ್ತದ ಪರಿಹಾರಕ್ಕೆ ಬೇಡಿಕೆ ಇಡಲಿದೆ ಎಂದು ತಿಳಿಸಿದ್ದರು.
ಚೀನಾದ ವುಹಾನ್ ನಲ್ಲಿ ಕಳೆದ ಡಿಸೆಂಬರ್ ತಿಂಗಳಲ್ಲಿ ಕೋವಿಡ್ 19 ವೈರಸ್ ಮೊದಲಿಗೆ ಹರಡಲು ಆರಂಭವಾಗಿತ್ತು. ಬಳಿಕ ಇದು ಜಾಗತಿಕವಾಗಿ ಎರಡು ಲಕ್ಷ ಜನರನ್ನು ಬಲಿತೆಗೆದುಕೊಂಡಿದ್ದು, 30 ಲಕ್ಷ ಅಧಿಕ ಜನರು ಕೋವಿಡ್ 19 ಸೋಂಕಿಗೆ ಒಳಗಾಗಿದ್ದರು. ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಸುಮಾರು 59 ಸಾವಿರ ಸಾವು ಸಂಭವಿಸಿದ್ದು, ಹತ್ತು ಲಕ್ಷಕ್ಕೂ ಅಧಿಕ ಜನರು ಸೋಂಕಿಗೆ ಗುರಿಯಾಗಿದ್ದರು.