Advertisement

Kodagu ಜಿಲ್ಲೆಗೆ 18 ಸಾವಿರ ಜನಸಂಖ್ಯೆಗೊಂದು ಜಿಪಂ ಸ್ಥಾನ: ಮಸೂದೆ ವಿಧಾನಸಭೆಯಲ್ಲಿ ಅಂಗೀಕಾರ

10:46 PM Feb 19, 2024 | Team Udayavani |

ಬೆಂಗಳೂರು: ಕೊಡಗು ಜಿಲ್ಲೆಗೆ ಅನ್ವಯ ಆಗುವಂತೆ ಪ್ರತಿ ಹದಿನೆಂಟು ಸಾವಿರ ಗ್ರಾಮೀಣ ಜನತೆಗೆ ಅಥವಾ ಅದರ ಭಾಗಕ್ಕೆ ಒಬ್ಬ ಜಿಲ್ಲಾ ಪಂಚಾಯತ್‌ ಸದಸ್ಯರನ್ನು ಚುನಾಯಿಸುವ ಅವಕಾಶ ನೀಡುವ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ತಿದ್ದುಪಡಿ) ಮಸೂದೆಗೆ ವಿಧಾನಸಭೆ ಒಪ್ಪಿಗೆ ನೀಡಿದೆ.

Advertisement

ಕೊಡಗು ಜಿಲ್ಲೆ ಸಂಪೂರ್ಣವಾಗಿ ಮಲೆನಾಡಿನಂತೆ ಕಡಿಮೆ ಜನ ಸಾಂದ್ರತೆ ಮತ್ತು ಜನಸಂಖ್ಯೆ ಚದರಿದ ಗುಡ್ಡಗಾಡು ಪ್ರದೇಶವಾಗಿದೆ. ಕೆಲವು ಸಂದರ್ಭಗಳಲ್ಲಿ ಜಿಲ್ಲಾ ಪಂಚಾಯತ್‌ ಕ್ಷೇತ್ರವು ಭೌಗೋಲಿಕವಾಗಿ 100 ಕಿ.ಮೀ.ವರೆಗೆ ವ್ಯಾಪಿಸಿದೆ.

ಭೂ ವಿಸ್ತೀರ್ಣವು ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಆಡಳಿತದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿದೆ. ಇದನ್ನು ಪರಿಗಣಿಸಿದ ಸರಕಾರ ಈ ಮಸೂದೆಯನ್ನು ಮಂಡಿಸಿತ್ತು.

ಜಿಪಂ, ತಾಪಂ ವೈಜ್ಞಾನಿಕವಾಗಿ ಪುನರ್‌ ವಿಂಗಡಣೆ: ಖರ್ಗೆ
ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ನಡೆದ ಚರ್ಚೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಮಸೂದೆಯನ್ನು ನಾವು ಸ್ವಾಗತಿಸುತ್ತೇವೆ. ಆದರೆ ಜನಸಂಖ್ಯೆಯ ಜತೆಗೆ ಭೂ ವಿಸ್ತೀರ್ಣವನ್ನೂ ಪರಿಗಣಿಸಿ ಕ್ಷೇತ್ರದ ಗಾತ್ರವನ್ನು ನಿಗದಿ ಪಡಿಸಬೇಕು ಎಂದು ಸಲಹೆ ನೀಡಿದರು. ಹಾಗೆಯೇ ತಾಲೂಕು ಪಂಚಾಯತ್‌ಗಳಿಗೆ ಗ್ರಾ.ಪಂ.ಗಳನ್ನು ವೈಜ್ಞಾನಿಕ ರೀತಿಯಲ್ಲಿ ಪುನರ್‌ ವಿಂಗಡಣೆ ಮಾಡಬೇಕು ಎಂದು ಸರಕಾರಕ್ಕೆ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಮುಂದಿನ ತಾಲೂಕು ಪಂಚಾಯತ್‌ ಮತ್ತು ಜಿಲ್ಲಾ ಪಂಚಾಯತ್‌ಗಳ ಕ್ಷೇತ್ರ ಪುನರ್‌ ವಿಂಗಡಣೆಯನ್ನು ವೈಜ್ಞಾನಿಕವಾಗಿ ಮಾಡುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next